

ಎನ್.ಆರ್.ಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಹಲವು ಕಾರ್ಯಕ್ರಮ ರೂಪಿಸುತ್ತಿವೆ ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಂಧ್ಯಾ ಹೆಗಡೆ ತಿಳಿಸಿದರು.
ಗುರುವಾರ ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಪಂ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಒಕ್ಕೂಟದಲ್ಲಿ ನೋಂದಾಯಿಸಿರುವ 38 ಸ್ವಸಹಾಯ ಸಂಘಗಳಲ್ಲಿ 19 ಸಂಘಗಳಿಗೆ 28.50 ಲಕ್ಷ ರೂಪಾಯಿನ್ನು ಶೇ.12ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ. ಈ ಪೈಕಿ ಎಲ್ಲ ಸಂಘಗಳೂ ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿ ಮಾಡಿ ಮತ್ತೆ ಸಾಲ ಪಡೆದುಕೊಂಡಿವೆ. ಸಂಜೀವಿನಿ ಒಕ್ಕೂಟ 3 ವಷರ್ದಲ್ಲಿ 2,64,038 ರೂಪಾಯಿ ಲಾಭ ಗಳಿಸಿದೆ. ಒಕ್ಕೂಟದಲ್ಲಿ 450 ಸದಸ್ಯರಿದ್ದಾರೆ. ಇನ್ನೂ ಹೆಚ್ಚಿನ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳನ್ನು ಒಕ್ಕೂಟದಲ್ಲಿ ನೋಂದಾಯಿಸಿ 1 ಸಾವಿರ ಸದಸ್ಯರನ್ನು ಸೇರಿಸುವ ಗುರಿ ಹೊಂದಿದ್ದೇವೆ ಎಂದರು.
ಎನ್‌ಆರ್‌ಎಲ್‌ಎಂ. ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ಎನ್.ಆರ್.ಪುರ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟಗಳಿವೆ. 13 ಒಕ್ಕೂಟಗಳ ವಾರ್ಷಿಕ ಮಹಾ ಸಭೆ ಮುಗಿಸಿದ್ದೇವೆ ಎಂದರು.
ಕಡಹಿನಬೈಲು ಗಾಪಂ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ಮಹಿಳೆಯರು ಇಂಥ ವೇದಿಕೆಗಳನ್ನು ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಮಹಿಳೆಯು ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಪುರುಷನ ಯಶಸ್ಸಿನ ಹಿಂದೆ ನಿಂತಿದ್ದಾಳೆ. ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶುಭಾ ಹಾಗೂ ಸಂಜೀವಿನಿ ಒಕ್ಕೂಟದ ಹಿಂದಿನ ಪದಾಧಿಕಾರಿಗಳಾದ ಸಲೀನಾ, ರಾಗಿಣಿ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯರಾದ ಲಿಲ್ಲಿ, ಶೈಲಾ ಮಹೇಶ್, ಎ.ಬಿ.ಮಂಜುನಾಥ್, ವಲಯ ಮೇಲ್ವಿಚಾರಕ ಗಿರೀಶ್, ಚಂದ್ರಿಕಾ, ವಾಣಿ ನರೇಂದ್ರ, ರವೀಂದ್ರ, ಪೂರ್ಣಿಮಾ, ಸಲೀನಾ, ರಾಗಿಣಿ, ಸುಮಿತ್ರಾ, ಶೈನಿ, ಶ್ವೇತಾ, ವಿನೋದಾ, ಚಂದ್ರಿಕಾ, ಮಾಲಿನಿ ಇತರರಿದ್ದರು.