

ಕಾರವಾರ: ರೈತರಿಗೆ ನೀಡುವ ಗರಿಷ್ಠ ಸಾಲದ ಮಿತಿಯನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿ ವರ್ಷ ಕಳೆದರೂ ಸೌಲಭ್ಯವನ್ನು ರೈತರಿಗೆ ಒದಗಿಸದೇ ಸಹಕಾರ ಇಲಾಖೆ ಮಹಾ ಮೋಸ ಮಾಡಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲದ ಗರಿಷ್ಠ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಶೇ. 3 ರ ಬಡ್ಡಿ ದರದ ದೀರ್ಘಾವದಿ ಕೃಷಿ ಸಾಲದ ಮಿತಿಯನ್ನು 10 ರಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಿ ಸರ್ಕಾರ 2023 ರ ಸೆಪ್ಟೆಂಬರ್ 8 ರಂದು ಸರ್ಕಾರ ಆದೇಶ ಹೊರಡಿಸಿತ್ತು. ಅದಕ್ಕಾಗಿ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ಇರಿಸಲಾಗಿತ್ತು. ಆದರೆ, ಇತ್ತೀಚಿನವರೆಗೂ ಈ ಬಗ್ಗೆ ಸಹಕಾರ ಇಲಾಖೆಯು ಈ ಸಂಬಂಧ ಡಿಸಿಸಿ ಬ್ಯಾಂಕ್‌ಗಳಿಗೆ ಯಾವುದೇ ಸುತ್ತೋಲೆ ಹೊರಡಿಸಿ ಸೂಚನೆ ನೀಡಿರಲಿಲ್ಲ. ನಾವು ಮಾಹಿತಿ ಹಕ್ಕಿನಡಿ ಜುಲೈ 20 ರಂದು ಮಾಹಿತಿ ಕೇಳಿದ ನಂತರ ಜುಲೈ 27 ಕ್ಕೆ ಸಹಕಾರಿ ಇಲಾಖೆಯು ಎಲ್ಲ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಆದೇಶ ಹೊರಡಿಸಿದೆ. ಆದರೆ, ಇಂದಿನವರೆಗೂ ಸಹಕಾರ ಸಂಘಗಳಿಗೆ ಆದೇಶ ತಲುಪಿಲ್ಲ.
ಅತಿವೃಷ್ಟಿಯಿಂದ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಅಡಕೆ, ಕಾಳು ಮೆಣಸು ಮುಂತಾದ ರೋಗಗಳಿಂಂದ ರೈತರಿಗೆ ತೀವ್ರ ಹಾನಿಯಾಗಿದೆ. ಇಂಥ ಸಂದರ್ಭದಲ್ಲೂ ಸರ್ಕಾರ ನೀಡಿದ ಸೌಲಭ್ಯವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸದೇ ಸಹಕಾರ ಸಂಘಗಳ ಇಲಾಖೆ ರೈತರಿಗೆ ಮೋಸ ಮಾಡುತ್ತಿದೆ. ಇದನ್ನು ಖಂಡಿಸಿ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದೇವೆ ಎಂದರು. ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ, ಸಂಘಟನೆಯ ಅಂಕೋಲಾ ತಾಲೂಕು ಅಧ್ಯಕ್ಷ ರಾಘವೇಂದ್ರ ಗಾಂವಕರ್ ಸುದ್ದಿಗೋಷ್ಠಿಯಲ್ಲಿದ್ದರು.
ಅತಿವೃಷ್ಠಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದರಿಂದ ನಾವು ಸಾಲ ಮನ್ನಾ ಮಾಡುವಂತೆ ಕೇಳುತ್ತಿಲ್ಲ. ಆದರೆ, ಜಿಲ್ಲೆಯ ಸಾಲ ಕೊಡುವ ಗರಿಷ್ಠ ಮಿತಿ( ಸ್ಕೇಲ್ ಆಫ್ ಫೈನಾನ್ಸ್)ಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದ್ದೇವೆ. ಅದರಿಂದ ರೈತರಿಗೆ ಹೆಚ್ಚಿನ ಸಾಲ ಸಿಕ್ಕಿ ಅನುಕೂಲವಾಗುತ್ತದೆ ಎಂದು ಶಿವರಾಮ ಗಾಂವಕರ್ ತಿಳಿಸಿದರು.