ಸಕಾಲಕ್ಕೆ ಸಾಲ ಮರುಪಾವತಿಸಿ : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ

26TMK_Bhalabhavana 1
Published on

ತುಮಕೂರು: ರಾಜ್ಯದಲ್ಲಿ ದೇವದಾಸಿ ತೊರೆದಿರುವವರು ಹಾಗೂ ಅವರ ಮಕ್ಕಳು ಮತ್ತೆ ಆ ವೃತ್ತಿಗೆ ತೆರಳದಂತೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುವು ಮಾಡಿಕೊಡುವ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ತಿಳಿಸಿದರು.

ನಗರದ ಬಾಲಭವನದಲ್ಲಿ ಬುಧವಾರ ವಿವಿಧ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಿಸಿ, ಪ್ರಗತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಜಿ ದೇವದಾಸಿಯರ ಪುನರ್ವಸತಿ ಹಾಗೂ ಆರ್ಥಿಕಾಭಿವೃದ್ಧಿಗಾಗಿ ಈ ಹಿಂದೆ ನಿಗಮದಿಂದ ನೀಡಲಾಗುತ್ತಿದ್ದ 25000 ರೂ.ಗಳ ಸಹಾಯಧನ ಜತೆಗೆ 1 ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದರು.

ಮಹಿಳಾ ಅಭಿವೃದ್ಧಿ ನಿಗಮ ಶೋಷಿತ ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರನ್ನು ಕೈಹಿಡಿದು ಮೇಲಕ್ಕೆತ್ತುವ ಕೆಲಸ ಮಾಡುತ್ತಿದೆ. ಇಂತಹವರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ವಿವಿಧ ಯೋಜನೆಗಳಡಿ ಸಾಲಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಪ್ರಯೋಜನ ಪಡೆಯಬಹುದು ಎಂದರು.

ನಿಗಮದಿಂದ ಸಾಲ ಪಡೆದವರು ಕಾಲಮಿತಿಯೊಳಗಾಗಿ ಮರು ಪಾವತಿ ಮಾಡಬೇಕು, ಹಾಗೆ ಮರುಪಾವತಿ ಮಾಡುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಗುವುದು. ಪಡೆದ ಸಾಲವನ್ನು ಕಾಲ-ಕಾಲಕ್ಕೆ ಮರುಪಾವತಿ ಮಾಡಿದಾಗ ಇನ್ನೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಸಾಲ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಹಾಯಧನದ ಆಸೆಗಾಗಿ ಸಾಲ ಸೌಲಭ್ಯ ಪಡೆಯಬಾರದು, ಈ ರೀತಿ ಸಾಲ ಪಡೆದಲ್ಲಿ ಯೋಜನೆ ಯಶಸ್ಸು ಕಾಣುವುದಿಲ್ಲ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದರಲ್ಲದೆ, ಸಾಲ ಪಡೆದು ಅಭಿವೃದ್ಧಿ ಹೊಂದಿದ ಮಹಿಳೆಯರು ಇತರ ಮಹಿಳೆಯರಿಗೂ ದಾರಿ ತೋರಿಸಬೇಕು ಎಂದರು.

ಕರೊನಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದ ಮಹಿಳೆಯರಿಗೆ ನಿಗಮ ನೀಡಿದ ಸಹಾಯಧನದಿಂದ ಅವರ ಕುಟುಂಬದವರ ಜೀವನ ನಿರ್ವಹಣೆಗೂ ಅನುಕೂಲವಾಗಿದೆ, ಟೋಲ್‌ಗಳಲ್ಲಿ ಭಿಕ್ಷೆ ಬೇಡುವ ಲಿಂಗತ್ವ ಅಲ್ಪಸಂಖ್ಯಾತರು ಇನ್ನು ಮುಂದೆ ಕೈಚಾಚಿ ಭಿಕ್ಷೆ ಬೇಡದೆ ಕೈ ಎತ್ತಿ ನೀಡುವಂತಾಗಬೇಕು. ಇದಕ್ಕಾಗಿ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ನೀಡಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್. ನಟರಾಜ್ ಮಾತನಾಡಿ, ಮಹಿಳೆಯರು ಗೌರವಯುತವಾಗಿ ಬದುಕಲು ನಿಗಮದಿಂದ ಹಲವಾರು ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ದಮನಿತ ಮಹಿಳೆಯರು, ಬೀದಿ ಬದಿ ವ್ಯಾಪಾರಸ್ಥರು, ಮತ್ತಿತರ ನಿರ್ಗತಿಕ ಮಹಿಳೆಯರು ಈ ಸಾಲದ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಜಿಪಂ ಉಪಕಾರ್ಯದರ್ಶಿ ಡಿ.ಎಸ್.ಉಪಾಧ್ಯ, ನಿಗಮದ ಅಭಿವೃದ್ಧಿ ನಿರೀಕ್ಷಕಿ ಎಸ್.ಜಾಹ್ನವಿ, ಜಿಲ್ಲಾ ನಿರೂಪಣಾಧಿಕಾರಿ ಶ್ರೀಧರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಿವಕುಮಾರಯ್ಯ, ಓಂಕಾರಪ್ಪ, ಮತ್ತಿತರರು ಹಾಜರಿದ್ದರು. ನಂತರ ಉದ್ಯೋಗಿನಿ, ಸಮೃದ್ಧಿ ಯೋಜನೆ ಸೇರಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ ಮಾಡಲಾಯಿತು ಹಾಗೂ ಸಹಬಾಳ್ವೆ ಸಂಘದ ಅಧ್ಯಕ್ಷ ದೀಪಿಕಾ ಅವರ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಅವರು ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

ಬ್ಯಾಂಕುಗಳು ಕೆರೆ ನೀರಿದ್ದಂತೆ: ಸರ್ಕಾರದ ಯಾವುದೇ ಸಾಲ ಯೋಜನೆ ಯಶಸ್ವಿಯಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತಿವೆ, ಸಾಲ ಪಡೆದವರಿಂದ ವಸೂಲಾತಿಯಾದಾಗ ಮರು ಸಾಲ ನೀಡಲು ಅನುವಾಗುತ್ತದೆ. ಬ್ಯಾಂಕುಗಳು ಕೆರೆಯ ನೀರಿದ್ದಂತೆ. ಕೆರೆಯ ನೀರು ಬತ್ತದಂತೆ ಸಾಲ ಪಡೆದವರು ನಿಗದಿತ ಸಮಯದೊಳಗೆ ಮರು ಪಾವತಿ ಮಾಡಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ನಾರಾಯಣಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net