ಹಾವೇರಿ: ಇ-ಸ್ವತ್ತು ಉತಾರ ದುರಸ್ಥಿ ಮಾಡಲು 15 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಸವಣೂರ ಪುರಸಭೆ ಅಟೆಂಡರ್ ಸುನೀಲ ಶ್ರೀನಿವಾಸ ಪೂಜಾರನನ್ನು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸುನೀಲ ಪೂಜಾರನನ್ನು ಫೆ.1ರಿಂದ ಅನ್ವಯಿಸುವಂತೆ ಲೋಕಾಯುಕ್ತ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅನುಮಾತ್ತುಗೊಳಿಸಿದೆ. ಹಾನಗಲ್ಲ ಪುರಸಭೆಯಲ್ಲಿ ಖಾಲಿ ಇರುವ ಅಟೆಂಡರ್ ಹುದ್ದೆಗೆ ಬದಲಾಯಿಸಿದೆ. ಕೆ.ಸಿ.ಎಸ್.ಆರ್. ನಿಯಮ 98ರಂತೆ ಈ ನೌಕರನು ಜೀವನಾಧಾರ ಭತ್ಯೆಗೆ ಅರ್ಹನಿದ್ದು, ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲವೆಂದು ಸಹ ಆದೇಶಿಸಲಾಗಿದೆ.