

ಜಿಲ್ಲೆಯಲ್ಲಿ ಸರ್ಕಾರಿ ಜಮೀನು, ಗುಡ್ಡಗಳು, ರುದ್ರಭೂಮಿಗಳು ಒತ್ತುವರಿ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಸರ್ಕಾರಿ ಇಲಾಖೆ ಕಚೇರಿ ಕಟ್ಟಡಗಳಿಗೆ, ಸ್ಮಶಾನಗಳಿಗೆ ಭೂಮಿ ಸಿಗುತ್ತಿಲ್ಲ. ಬೇಕಾಬಿಟ್ಟಿಯಾಗಿ ನಿರ್ಮಾಣಗೊಳ್ಳುತ್ತಿರುವ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಿ ಎಂದು ಶಾಸಕರು, ವಿಧಾನಪರಿಷತ್ ಸದಸ್ಯರು ಆಗ್ರಹಿಸಿದರು.
ನಗರದ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ರಾಜು ಕಾಗೆ, ವಿಧಾನಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ನಾಗರಾಜ ಯಾದವ ಮಾತನಾಡಿ, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಕೆಲಸಗಳಿಗೆ ಜಮೀನು ಸಿಗುತ್ತಿಲ್ಲ. ಎಲ್ಲ ಕಡೆದ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಮುಂದಿನ ಕೆಡಿಪಿ ಸಭೆಯ ಒಳಗಾಗಿ ಸರ್ಕಾರಿ ಜಮೀನು, ರುದ್ರಭೂಮಿಗಳ ಒತ್ತುವರಿ ತೆರವುಗೊಳಿಸಿ ಗಡಿ ಗುರುತಿಸಲಾಗುವುದು. ಎಲ್ಲ ಸರ್ಕಾರಿ ಆಸ್ತಿಗಳನ್ನು ಗುರುತಿಸಿ ನಾಮಫಲಕ ಹಾಕಿ ಸಮಗ್ರ ವರದಿಯನ್ನು ಸಭೆಗೆ ಮಂಡಿಸಲಾಗುವುದು. ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಪಶು ಸಂಗೋಪನೆ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಹೊಸದಾಘಿ ಜಿಲ್ಲಾಸ್ಪತ್ರೆ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ನಗರದ ಕೆಲವು ಸರ್ಕಾರಿ ಶಾಲೆಗಳಿಗೆ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನದಡಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೆ ತಾಂತ್ರಿಕ ತೊಂದರೆಯಾಗುತ್ತಿದ್ದು, ಅದನ್ನು ಸರಿಪಡಿಸಬೇಕು. ನಗರದಲ್ಲಿ ಸರ್ಕಾರಿ ಶಾಲೆ ಕಟ್ಟಡಗಳ ದುರಸ್ತಿ ಪಾಲಿಕೆ ಅವಕಾಶ ನೀಡುತ್ತಿಲ್ಲ ಎಂದು ಡಿಡಿಪಿಐ, ಬಿಇಒ ಹೇಳುತ್ತಿದ್ದಾರೆ. ಜಿಲ್ಲಾಡಳಿತ ಕೆಲ ಸಿಬ್ಬಂದಿ ಉದ್ದೇಶ ಪೂರಕವಾಗಿಯೇ ತಡೆ ಹಿಡಿಯುತ್ತಿದ್ದು, ಜಿಲ್ಲಾಧಿಕಾರಿಗಳು ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಮಹಾನಗರ ಪಾಲಿಕೆ ಸರ್ಕಾರದ ಒಂದು ಭಾಗವಾಗಿರುವುದು ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ತಡೆಹಿಡಿಯುವ ಅಧಿಕಾರ ಅವರಿಗಿಲ್ಲ. ಶಿಕ್ಷಣ ಇಲಾಖೆ, ಪಾಲಿಕೆ ಹಾಗೂ ಜಿಲ್ಲಾಡಳಿತದ ನಡುವೆ ಸಮನ್ವತೆ ಇಲ್ಲದಿರುವ ಕಾರಣ ಸಮಸ್ಯೆಗಳು ಉದ್ಭವಿಸುತ್ತಿವೆ. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿದ್ದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.
ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒ, ಪಾಲಿಕೆ, ಡಿಡಿಪಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಂಡರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿ ಡೆಸ್ಕ್‌ಗಳ ಸೌಲಭ್ಯ ಕಲ್ಪಿಸಬೇಕು. ಹೆಚ್ಚುವರಿ ಡೆಸ್ಕ್‌ಗಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.