

ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆರೋಗ್ಯ 24 ಗಂಟೆಯಲ್ಲಿ ಚೇತರಿಸಿದೆ. ಬೆನ್ನುಹುರಿಗೆ ಪೆಟ್ಟಾಗಿದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಚಿವರು ಇನ್ನೂ 10 ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವಿಜಯಾ ಆಸ್ಪತ್ರೆ ವೈದ್ಯ ಡಾ. ರವಿ ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಮೂರು ದಿನಗಳ ಕಾಲ ಚಿಕಿತ್ಸೆ ಡಿಶ್ಚಾರ್ಜ್ ಮಾಡಲಾಗುವುದು. 8ರಿಂದ 10 ದಿನಗಳ ವಿಶ್ರಾಂತಿ ಪಡೆಯಬೇಕಾದ ಅಗತ್ಯವಿದೆ. 24 ಗಂಟೆಯಲ್ಲಿ ಉತ್ತಮವಾಗಿ ಆರೋಗ್ಯ ಸ್ಪಂದಿಸುತ್ತಿದೆ. ಬೇರೆ ಆಸ್ಪತ್ರೆಗೆ ಕಳುಹಿಸುವ ಅಗತ್ಯವಿಲ್ಲ. ಇಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಮೊದಲ ದಿನ ಎಂಆರ್‌ಐ, ಸಿಸಿ ಸ್ಕಾö್ಯನ್ ಮಾಡಲಾಗಿತ್ತು. ಎರಡನೇ ದಿನ ರಕ್ತದ ಮಾದರಿ ತಪಾಸಣೆ ನಡೆಸಲಾಗಿದೆ. ಹೆಚ್ಚು ಕ್ಯಾಲ್ಶಿಯಂ ಹಾಗೂ ಹೆಚ್ಚು ಪ್ರೋಟಿನ್‌ಯುಕ್ತ ಆಹಾರ ಸೇವಿಸುವಂತೆ ಸಲಹೆ ನೀಡಲಾಗಿದೆ. ಇಣ ಹಣ್ಣುಗಳು, ಪನೀರ್, ಮೊಳಕೆಯೊಡೆದ ಕಾಳುಗಳು, ಅಳವಿ, ಮೊಸರು ಹೆಚ್ಚಾಗಿ ಸೇವಿಸುತ್ತಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರೂ ಚೇತರಿಸಿಕೊಳ್ಳುತ್ತಿದ್ದಾರೆ. ತಲೆಯ ಸಿಟಿ ಸ್ಕಾö್ಯನ್ ಮಾಡಿದ್ದರಿಂದ ಮೆದುಳಿಗೆ ತುಸು ಊತ ಇದ್ದು, ಗುಣಮುಖರಾಗುತ್ತಿದ್ದಾರೆ. ಚನ್ನರಾಜ ಇನ್ನೂ 10 ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ. ಕಾರು ಚಾಲಕ ಹಾಗೂ ಗನ್‌ಮ್ಯಾನ್ ಕೈ, ಭುಜಕ್ಕೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.
-----ಬಾಕ್ಸ್-----
ಆಸ್ಪತ್ರೆ ಬಳಿ ಜನಜಂಗುಳಿ
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮುಖಂಡರು, ಕಾರ್ಯಕರ್ತರು ಬುಧವಾರವೂ ಆಸ್ಪತ್ರೆ ಕಡೆಗೆ ಧಾವಿಸಿ ಬಂದಿದ್ದರು. ಆಸ್ಪತ್ರೆ ಬಳಿ ಪೊಲೀಸ್ ಭದ್ರತೆ ಇದೆ. ಕೆಲ ನಾಯಕರು ಒಳಗೆ ಹೋಗಲು ಪ್ರಯತ್ನಿಸಿದರೂ ಯಾರನ್ನೂ ಒಳಗೆ ಬಿಡಲಾಗುತ್ತಿಲ್ಲ. ಹೆಬ್ಬಾಳಕರ ಬೇಗ ಗುಣಮುಖರಾಗಲಿ ಎಂದು ಜನರು ಹಾರೈಸುತ್ತಿದ್ದಾರೆ.