

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಗಂಡಸಿ ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದಿಂದ ಮಕ್ಕಳ ಮನೆ ಚಿಂತನೆಯಡಿ ಸೋಮವಾರ ಆರಂಭಿಸಲಾದ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಆಶೀರ್ವಚನ ನೀಡಿ, 1996ರಲ್ಲಿ ನಿರ್ಮಾಣವಾಗಿ ಪಾಳು ಬಿಟ್ಟಿದ್ದ ಸರ್ಕಾರಿ ಶಾಲೆಯನ್ನು ಕೇವಲ 12 ದಿನಗಳಲ್ಲಿ ಸ್ವಯಂ ಸೇವಕರ ಸಹಾಯದಿಂದ ಅಭಿವೃದ್ಧಿಪಡಿಸಿದ ದಾನಿಗಳಿಗೆ ಕಾರ್ಯ ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷ ಶಶಿಧರ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವುದು ನಮ್ಮ ಊರಿನ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಆಗಿರುತ್ತದೆ. ಗ್ರಾಮಸ್ಥರು ಜವಾಬ್ದಾರಿ ಮರೆತುಬಿಟ್ಟರೆ ಸರ್ಕಾರಿ ಶಾಲೆಗಳು ಅವನತಿ ಹೊಂದುತ್ತವೆ. ಇದರಿಂದ ಖಾಸಗಿ ಶಾಲೆಗಳು ಹೆಚ್ಚಾಗಿ ಬಡವರು ಮಕ್ಕಳ ಕಲಿಕೆಗಾಗಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ನಾವು ಓದಿದ ಶಾಲೆಗೆ ನಮ್ಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಬಿಆರ್‌ಪಿ ಸುಪ್ರೀತಾ, ಸಿಆರ್‌ಪಿ ರಮೇಶ್, ಹೂವಿನ ಹೊಳೆ ಸಂಸ್ಥಾಪಕ ನಂದಿ.ಜೆ ಹೂವಿನಹೊಳೆ, ಟಿಪಿಇಒ ನಿವೃತ್ತಾಧಿಕಾರಿ ಶಿವಶಂಕರ್, ಪ್ರಕೃತಿ ಫೌಂಡೇಶನ್ ನವ್ಯಾ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಿಬ್ಬಂದಿ, ದಾನಿಗಳು ಮತ್ತು ಕೆಂಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.