

ಬೆಂಗಳೂರು: ಶಾಲೆ ಮತ್ತೆ ಶುರು ಯಾವಾಗ ಎಂಬುದು ಈಗಾಗಲೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ, ತೆರೆದರೂ ನಾವು ಮಕ್ಕಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಪಾಲಕರನೇಕರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಲಕರ ಧ್ವನಿ, ಮಕ್ಕಳ ಕುರಿತ ಅವರ ಕಾಳಜಿಯು ಸರ್ಕಾರ ಹಾಗೂ ಸಂಬಂಧಿತ ಇಲಾಖೆಯ ಕಣ್ಣು ತೆರೆಸಿದೆಯೋ ಇಲ್ಲವೋ? ಈ ನಡುವೆ ಕರೊನಾ ಹಾವಳಿ ತಗ್ಗದ ಹಿನ್ನೆಲೆಯಲ್ಲಿ ಶಾಲೆಗೆ ಕಾಲಿಡಲು ಹಿಂಜರಿಯುತ್ತಿರುವ ಮಕ್ಕಳೂ ಇದೀಗ ಸ್ವತಃ ವಿನಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ.
ಬೆಂಗಳೂರಿನ ಶಾಲೆಯೊಂದರ ಎಲ್ಕೆಜಿ ವಿದ್ಯಾರ್ಥಿನಿ ಸಾನ್ವಿ, 'ಶಾಲೆಯನ್ನು ಈಗಲೇ ಶುರು ಮಾಡಬೇಡಿ. ಶಾಲೆಯಲ್ಲಿ ತುಂಬ ಮಕ್ಕಳಿರುತ್ತಾರೆ, ಒಟ್ಟೊಟ್ಟಿಗೇ ಕುಳಿತಿರುತ್ತಾರೆ. ಬೆಂಗಳೂರಿನಲ್ಲಿ ಕರೊನಾ ಹೆಚ್ಚಳ ಆಗುತ್ತಿದೆ' ಎಂದು ಕೇಳಿಕೊಂಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿದ್ದು, ಆ ಮೂಲಕ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆಯಲು ಯತ್ನಿಸಿದ್ದಾಳೆ.