

ಮಡಿಕೇರಿ: ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ ಅರಿವು ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಐಸಿಡಿಎಸ್ ಸುವರ್ಣ ಮಹೋತ್ಸವದ ಅಂಗವಾಗಿ ಸರ್ಕಾರ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಯುಕೆಜಿಯನ್ನು ಪ್ರಾರಂಭಿಸುತ್ತಿದೆ. ತಾಲೂಕಿನ ೧೦ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಯುಕೆಜಿ ಪ್ರಾರಂಭವಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಡಗದಾಳು ಗ್ರಾಮ ಪಂಚಾಯಿತಿಯಿಂದ ೧೮ ಮಕ್ಕಳಿಗೆ ಸಮವಸ್ತ್ರ ಮತ್ತು ಐಡಿ ಕಾರ್ಡ್ಗ, ಪುಸ್ತಕ, ಪೆನ್ಸಿಲ್, ಬ್ಲಾಕ್ಸ್, ಚಾರ್ಟ್, ಫಜಲ್ಸ್, ಪ್ಲೇ ಮ್ಯಾಟ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಕಲ್ಮೇಶ್ ಅವರು ವಿಶ್ವ ಜನಸಂಖ್ಯಾ ದಿನಾಚರಣೆ ಕುರಿತು ಅರಿವು ಮೂಡಿಸಿ, ಮಳೆಗಾಲದಲ್ಲಿ ಬರುವಂತಹ ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಂಭಯ ಮಾತನಾಡಿ, ಇದೊಂದು ಉತ್ತಮವಾದ ಯೋಜನೆಯಾಗಿದೆ. ಸರ್ಕಾರಿ ಶಾಲೆಗಳು ಈಗಾಗಲೇ ಮುಚ್ಚುತ್ತಿದ್ದು, ಇಂತಹ ಯೋಜನೆಯಿಂದ ಮಕ್ಕಳ ಮತ್ತು ಶಾಲೆಯ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ಗ್ರಾಮ ಪಂಚಾಯಿತಿಯ ಸರ್ವ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಸಹಾಯಕಿ ಕಮಲ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಯೋಗೀಶ್, ಸದಸ್ಯರಾದ ಆನಂದ, ಭಾರತಿ, ಗೀತಾ, ಅಂಗನವಾಡಿ ಕಾರ್ಯಕರ್ತೆಯರಾದ ಕೆ.ಆರ್.ಅನಿಲ, ಸಾಜಿದ, ಅಶ್ವಿತ, ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾದ ಶಮ್ಮಿ ಪ್ರಭು, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಪ್ರತಿಮಾ, ಆಶಾ ಕಾರ್ಯಕರ್ತೆಯರಾದ ನೀಲಾವತಿ, ಶೋಭಾ ಹಾಗೂ ಗ್ರಾಮಸ್ಥರು, ಪೋಷಕರು, ಸ್ತ್ರೀಶಕ್ತಿ ಸದಸ್ಯರು ಹಾಜರಿದ್ದರು.