ಅರೆಕಾಡು ಅಂಗನವಾಡಿಯಲ್ಲಿ ಎಲ್‌ಕೆಜಿ ಪ್ರಾರಂಭೋತ್ಸವ

arekaadu anganavaadi
Published on

ಮಡಿಕೇರಿ: ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ನೆರವೇರಿತು.

ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಹಳ್ಳಿಗಳಲ್ಲಿ ಎಲ್‌ಕೆಜಿ ಇಲ್ಲದಿಲ್ಲ. ಇಂಗ್ಲಿಷ್ ಕಲಿಕೆಗಾಗಿ ಪಾಲಕರು ತಮ್ಮ ಮಕ್ಕಳನ್ನು ದೂರದಲ್ಲಿರುವ ಶಾಲೆಗೆ ವಾಹನಗಳಲ್ಲಿ ಮಕ್ಕಳ ದೈಹಿಕ ಮಾನಸಿಕ ಒತ್ತಡವನ್ನು ಲೆಕ್ಕಿಸದೆ ಕಳಿಸುತ್ತಿದ್ದರು. ಆದರೆ, ಇನ್ನು ಮುಂದೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿಯ ವ್ಯಾಸಂಗವನ್ನು ಪಡೆಯಬಹುದಾಗಿದೆ. ಇದು ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ. ಇದರ ಸದುಪಯೋಗ ಎಲ್ಲರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಅರೆಕಾಡು ಗ್ರಾಮ ಪಂಚಾಯಿತಿಯಿಂದ ೧೮ ಮಕ್ಕಳಿಗೆ ಸಮವಸ್ತ್ರ, ಚೇರ್, ಜಮಖಾನ, ಬೆಡ್ ಶೀಟ್, ಚಾಪೆ ಕೊಡುಗೆಯಾಗಿ ನೀಡಲಾಗಿದೆ. ಪಾಲಕರು ಮತ್ತು ಸಮುದಾಯದವರು ಸಹಕರಿಸಿದಲ್ಲಿ ಅರೆಕಾಡು ಎಲ್‌ಕೆಜಿಯನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡಬಹುದು ಎಂದರು.

ದಾನಿಗಳಾದ ಕುಕ್ಕೆರ ಪ್ರವೀಣ್ ಪೂವಯ್ಯ ಅವರು ಹದಿನೈದು ಚೇರ್ ನೀಡಿದ್ದಾರೆ. ತಾಜ್ ಮಹಲ್ ಸ್ವ ಸಹಾಯ ಸಂಘ, ಶ್ರೀ ಕೃಷ್ಣ ಸ್ವಸಹಾಯ ಸಂಘ, ನೂರ್ ಜಹಾನ್ ಸ್ತ್ರೀ ಶಕ್ತಿ ಸಂಘದ ವತಿಯಿಂದ ಆಟಿಕೆಗಳನ್ನು ಅಂಗನವಾಡಿಗೆ ಕೊಡುಗೆಯಾಗಿ ಪಡೆಯಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಕಾಡು ಮುಖ್ಯೋಪಾಧ್ಯಾಯರಾದ ಪದ್ಮಾವತಿ ಮಾತನಾಡಿ, ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆ ಆಂಗ್ಲ ಭಾಷಾ ಭೋದನೆ ದ್ವಿಭಾಷಾ ಭೋದನ ಪ್ರಾರಂಭವಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಮುದಾಯ ಆರೋಗ್ಯ ಅಧಿಕಾರಿ ಪುಷ್ಪ ಬಡಿಗೇರ್ ಅವರು, ಅತಿಸಾರ ಬೇದಿ ತಡೆಗಟ್ಟಲು ಮುಂಜಾಗ್ರತಾ ಕ್ರಮ, ವಿಶ್ವ ಜನಸಂಖ್ಯಾ ದಿನಾಚರಣೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅರೆಕಾಡು ಗ್ರಾಮ ಪಂಚಾಯತಿ ಕಾರ್ಯದರ್ಶಿ ತೇಜಸ್, ಸದಸ್ಯರಾದ ಯೂಸುಫ್, ಉಷಾ ತಂಗಮ್ಮ, ಆಶಾ ಕಾರ್ಯಕರ್ತೆಯರಾದ ಸಾಜಿದ, ಕವಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಹರಿಣಾಕ್ಷಿ, ಸವಿತಾ, ಪಾರ್ವತಿ, ಭವಾನಿ, ಲತಾ, ನಳಿನಿ, ಸಹಾಯಕಿ ರಮ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net