

ಚಿಕ್ಕಮಗಳೂರು: ಅಮಲಿನಲ್ಲಿ ತೇಲಿಸುವ ಮಾದಕ ವಸ್ತುಗಳಿಂದ ಯುವಸಮೂಹ ಅಂತರ ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಸಮಯವನ್ನು ವಿದ್ಯಾಭ್ಯಾಸದ ಕಲಿಕೆಯತ್ತ ಗಮನಹರಿಸಬೇಕು ಎಂದು ವೈದ್ಯ ಡಾ. ಅನಿತ್ ಕುಮಾರ್ ತಿಳಿಸಿದರು.
ನಗರದ ಹಿರೇಮಗಳೂರು ಸಮೀಪದ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ಶ್ರಿ ಶಕ್ತಿ ಮದ್ಯಪಾನ ವ್ಯಸನಮುಕ್ತಿ ಮತ್ತು ಪುನರ್ ವಸತಿ ಕೇಂದ್ರದಿAದ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನಶೆಮುಕ್ತ ಭಾರತ ಅಭಿಯಾನ, ೭೮ನೇ ಸ್ವಾತಂತ್ರÈ ದಿನಾಚರಣೆ ಪ್ರಯುಕ್ತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಣಮಾತ್ರದ ಸುಖ ಪಡೆದುಕೊಳ್ಳುವ ಸಲುವಾಗಿ ಕೆಲವು ಯುವಕರು ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ದಾಸರಾಗಿದ್ದಾರೆ. ಅಲ್ಪ ಅವಧಿಗೆ ಮಾತ್ರ ವ್ಯಸನ ಖುಷಿಯಿಂದಿರಿಸಲು ಸಾಧ್ಯ. ಭವಿಷ್ಯದಲ್ಲಿ ಮಾರಕವಾಗಿ ದೈಹಿಕಶಕ್ತಿಯನ್ನು ಕುಗ್ಗಿಸುತ್ತದೆ ಎಂದರು.
ಕೆಲವು ಕುಟುಂಬಗಳಲ್ಲಿ ಪಾಲಕರು ಬೀಡಿ, ಸಿಗರೇಟ್ ಅಥವಾ ಮದ್ಯಪಾನ ಸೇವಿಸುವುದನ್ನು ಕಾಣುವ ಮಕ್ಕಳು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದರಿತು ಪ್ರಾಯದಲ್ಲೇ ಚಟಗಳಿಗೆ ಬಲಿಯಾಗಿದ್ದಾರೆ. ಹೀಗಾಗಿ ಅಂಥ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ನಶ ಮುಕ್ತ ಭಾರತ ಅಭಿಯಾನವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ಶ್ರೀ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಒಬ್ಬರಿಂದ ಒಬ್ಬರಿಗೆ ಹರಡುವ ವ್ಯಸನದ ಚಟಗಳಿಗೆ ಯುವಪೀಳಿಗೆ ಬಲಿಯಾಗುತ್ತಿದೆ. ಇದರಿಂದ ಹೊರಬರಲು ಶಿಸ್ತು, ಸಂಯಮ ಹಾಗೂ ಮನಸ್ಸನ್ನು ಹತೋಟಿಯಲ್ಲಿಡಲು ಯುವಕರು ಮುಂದಾದರೆ ಮಾತ್ರ ವ್ಯಸನದಿಂದ ಮುಕ್ತರಾಗಲು ಸಾಧ್ಯ ಎಂದರು.
ಶ್ರೀ ಶಕ್ತಿ ಮದ್ಯಪಾನ ಕೇಂದ್ರದ ವ್ಯವಸ್ಥಾಪಕ ಎಚ್.ಮಂಜುನಾಥ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವ್ಯಸನದಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದೆ. ಹೀಗಾಗಿ ಯುವಕರು ವ್ಯಸನದಿಂದ ದೂರವಿರುವ ಮೂಲಕ ಕಲಿಕೆ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಕಲಚೇತನ ಕಲ್ಯಾಣಾಧಿಕಾರಿ ಪೃಥ್ವಿರಾಜ್, ಸಿಬ್ಬಂದಿ ಮೋಹನ್‌ಕುಮಾರ್, ಮುಖಂಡ ಮಂಜುನಾಥ್ ಮತ್ತಿತರರಿದ್ದರು.