

ಚಿಕ್ಕಮಗಳೂರು: ಶ್ರೇಷ್ಠ ಮೌಲ್ಯಗಳಂತೆ ಬದುಕುವುದೇ ಆಚಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ದೊಡ್ಡಕುರುಬರಹಳ್ಳಿ ಬಸವತತ್ವ ಪೀಠದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಚಂದ್ರಶೇಖರ ಸ್ವಾಮಿ ಅವರ 25ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ನೆರವೇರಿಸಿ ಮಾತನಾಡಿದ ಅವರು, ಆಚಾರವೆಂದರೆ ಕುಂಕುಮ, ವಿಭೂತಿ, ಗಂಧಕ್ಕೊ ಅಥವಾ ಶಿವದಾರ, ಉಡುದಾರ, ಜನಿವಾರಕ್ಕೆ ಹೋಲಿಸಿಕೊಂಡು ಬಿಡುತ್ತೇವೆ. ವಾಸ್ತವ ಅದಲ್ಲ ಎಂದರು.
ಕೆಟ್ಟದ್ದನ್ನೇ ಮಾಡುತ್ತ ಬದುಕುವುದು ಅನಾಚಾರ
ಸದಾಕಾಲ ಕೆಟ್ಟ ಆಲೋಚನೆ ಮಾಡುತ್ತ ಕೆಟ್ಟದ್ದನ್ನೇ ಮಾಡುತ್ತ ಬದುಕುವುದು ಅನಾಚಾರ, ಜಗತ್ತು ಧರ್ಮವನ್ನು ನೋಡಿದ ದೃಷ್ಟಿಗೂ ಭಾರತೀಯ ಮೂಲದಿಂದ ಧರ್ಮವನ್ನು ನೋಡಿದ ದೃಷ್ಟಿಗೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು.
ಸೂರ್ಯನ ಇರುವಿಕೆಗೆ ಸಾಕ್ಷಿ ಬೇಕಾಗಿಲ್ಲ. ಹಾಗೆ ತತ್ವದ ಅನುಷ್ಠಾನವೇ ಅದರ ಪ್ರಭಾವ ವಲಯವನ್ನು ವಿಸ್ತರಿಸುತ್ತ ಹೋಗುತ್ತದೆ. ಅದರಿಂದ ಬರುವ ಕಂಪನ ಮತ್ತು ಬೆಳಕು ಅದರ ಇರುವಿಕೆಯನ್ನು ಸೂಚಿಸುತ್ತದೆ. ಹಾಗೆ ಈ ಬಸವ ತತ್ವಪೀಠ ತತ್ವದ ಅನುಷ್ಠಾನ ಪೀಠವಾಗಿ ಆ ಮೂಲಕ ಸಂವೇದನೆ ಉಂಟು ಮಾಡುವಂಥ ಕಾರ್ಯವಾಗಬೇಕಿದೆ ಎಂದರು.
ಧಾರ್ಮಿಕ ಕ್ಷೇತ್ರಗಳ ಕೊಡುಗೆ ಗಣನೀಯ
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕು ಸವೆಸಬೇಕಾದ ಆದ್ಯ ಕರ್ತವ್ಯ ನಮ್ಮ ಮುಂದಿದೆ. ಯಾವುದೇ ಸರ್ಕಾರ ಮಾಡದಿರುವ ಅನೇಕ ಕೆಲಸವನ್ನು ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಧಾರ್ಮಿಕ ಸಂಸ್ಥೆಗಳು ಮಾಡುತ್ತಿವೆ. ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಆಕಾಂಕ್ಷೆಯೂ ಇದೆ ಆಗಿತ್ತು. 25 ವರ್ಷಗಳ ಹಿಂದೆ ಸ್ವಾಮೀಜಿ ಹಾಕಿಕೊಟ್ಟ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡರೆ ಭವಿಷ್ಯದ ಜೀವನ ಉತ್ತಮವಾಗುತ್ತದೆ ಎಂಬ ದೃಷ್ಟಿಯಿಂದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಆನ್‍ಲೈನ್ ಶಿಕ್ಷಣ ಶೇ.60 ಮಕ್ಕಳಿಗೆ ತಲುಪಿಲ್ಲ
ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ ಎಂದು ತಾಯಂದಿರು ಇಂದು ಬಹಳ ಆತಂಕ, ಚಿಂತೆಯಲ್ಲಿದ್ದಾರೆ. ಶಾಲೆ ಆರಂಭಿಸಿಲ್ಲ. ಪರೀಕ್ಷೆ ಕಡ್ಡಾಯವೆಂದು ಸರ್ಕಾರ ಹೇಳಿದೆ. ಆನ್‍ಲೈನ್ ಶಿಕ್ಷಣ ಶೇ.40 ಮಾತ್ರ ಮಕ್ಕಳನ್ನು ತಲುಪಿದ್ದು ಶೇ.60 ಮಕ್ಕಳನ್ನು ತಲುಪಿಲ್ಲ. ಸಿಇಟಿ ಪರೀಕ್ಷೆ ಬಂದರೆ ಆ ಮಕ್ಕಳ ಭವಿಷ್ಯವೇನು ಎಂದು ಪ್ರಶ್ನಿಸಿದರು.
ಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೋಹಿನಿ ಸಿದ್ದೇಗೌಡ, ಎಂ.ಎನ್.ಷಡಾಕ್ಷರಿ ಅವರನ್ನು ಗೌರವಿಸಲಾಯಿತು. ಸಾಹಿತಿ ಜರಗನ ಹಳ್ಳಿ ಶಿವಶಂಕರ್ ಉಪನ್ಯಾಸ ನೀಡಿದರು.
ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ್, ಸಿಡಿಎ ಅಧ್ಯಕ್ಷ ಸಿ.ಆನಂದ್, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಪೌರಾಯುಕ್ತ ಬಿ.ಸಿ.ಬಸವರಾಜು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು, ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್, ಶಿವಮೊಗ್ಗದ ಬೆನಕಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ತಿಪ್ಪೇರುದ್ರಪ್ಪ, ಚನ್ನೇಗೌಡ, ರುದ್ರೇಗೌಡ, ಮಲ್ಲೇಗೌಡ, ಈಶ್ವರಶೆಟ್ಟಿ, ಸಿದ್ದವೀರಪ್ಪ, ಶಿವರುದ್ರಪ್ಪ ಇದ್ದರು.