ಗ್ರಹಿಸುವ ಕಲೆಯಿದ್ದರೆ ಬದುಕುವುದು ಸುಲಭ

08 ylp 04 (pustaka)
Published on

ಯಲ್ಲಾಪುರ: ರಾಮಾಯಣವನ್ನು ಸೂಕ್ಷ್ಮವಾಗಿ ಗ್ರಹಿಸುವ ಕಲೆಯಿದ್ದರೆ ನಾವು ಬದುಕನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಅರ್ಥಧಾರಿ ಕುಮಟಾದ ಡಾ.ಜಿ.ಎಲ್. ಹೆಗಡೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ವಿಶ್ವದರ್ಶನ ಸೇವಾ, ವಿಶ್ವದರ್ಶನ ಪ್ರಕಾಶನ, ವಿಶ್ವದರ್ಶನ ಶಿಕ್ಷಣ ಸಮೂಹ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಯಲ್ಲಾಪುರ ಸಹಯೋಗದಲ್ಲಿ ಮುಕ್ತಾ ಶಂಕರ ಅವರ ’ಸೀತಾ ರಾಮಾಯಣ’ ಬಿಡುಗಡೆಗೊಳಿಸಿ, ಮಾತನಾಡಿದರು.

ರಾಮಾಯಣ, ಮಹಾಭಾರತದಂತಹ ಕೃತಿಗಳು ಇಂದಿನ ಪಠ್ಯದಲ್ಲಿ ಕಣ್ಮರೆಯಾಗತೊಡಗಿವೆ. ನಮ್ಮನ್ನಾಳುವ ರಾಜಕಾರಣಿಗಳು ಕೈಗೊಂಡ ನಿರ್ಣಯಗಳಿಂದಾಗಿ ಸಾತ್ವಿಕ ಚಿಂತನೆ, ಮಾರ್ಗದರ್ಶನ ಮರೆಮಾಚಿ ದುಸ್ಥಿತಿಗೆ ಕಾರಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಶಿಕ್ಷಣದಲ್ಲಿ ರಾಮಾಯಣ ಅಳವಡಿಸಿಕೊಳ್ಳುವ ಮೂಲಕ ಸಕಾರಾತ್ಮಕ ಚಿಂತನೆ ಅರಿಯಲು ಸಾಧ್ಯ. ಮಕ್ಕಳ ಪಠ್ಯಕ್ರಮ ಜೀವನ ನಿರ್ವಹಣೆಯ ಗೆಲುವು ಸಾಧಿಸಲು ಸಹಾಯಕವಾಗಬೇಕಿತ್ತು. ಆದರೆ, ಆದರ್ಶದ ಪಾಠಗಳು ಮಕ್ಕಳಿಗೆ ದೊರಕದಿರುವುದು ವಿಷಾದನೀಯ. ಮನಸು ಮತ್ತು ಬುದ್ಧಿಗೆ ಸಾಣೆ ಹಿಡಿಯುವ ಕಾವ್ಯ, ಕಥೆಗಳು ನಮ್ಮ ಮುಂದಿರಬೇಕು. ಆ ನಿಟ್ಟಿನಲ್ಲಿ ಮುಕ್ತಾ ಶಂಕರ ಅವರು ಮಾಡಿರುವ ಪ್ರಯತ್ನ ಶ್ಲಾಘನೀಯ ಎಂದರು.

ಶಿರಸಿಯ ಡಯಟ್ ಪ್ರಾಂಶುಪಾಲ ಎಂ.ಎಸ್. ಹೆಗಡೆ, ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಉಪಸ್ಥಿತರಿದ್ದರು. ಕೃತಿಕಾರರಾದ ಮುಕ್ತಾ ಶಂಕರ ಕೃತಿ ಕುರಿತು ಮಾತನಾಡಿದರು. ಸೀತಾ ರಾಮಾಯಣ ಕೃತಿಯಲ್ಲಿನ ಆಯ್ದ ಪದ್ಯಗಳನ್ನು ಲಕ್ಷೀ ಶಂಕರ ಭಟ್ಟ ವಾಚಿಸಿದರು. ಪಿ.ಯು.ಕಾಲೇಜು ಪ್ರಾಂಶುಪಾಲ ಡಾ.ಡಿ.ಕೆ. ಗಾಂವ್ಕರ ವ್ಯಾಖ್ಯಾನಿಸಿದರು.

ಶಿಕ್ಷಕ ವಿನೋದ ಭಟ್ಟ ಕೃತಿ ಪರಿಚಯಿಸಿದರು. ವಿಧಿವಿಜ್ಞಾನ ಇಲಾಖೆಯ ವಿಜ್ಞಾನಿ ಡಾ.ಟಿ.ಎಸ್. ತಿಲಕರಾಜ, ಶಿಕ್ಷಕಿ ಪ್ರೇಮಾ ಗಾಂವ್ಕರ, ಅ.ಭಾ.ಸಾ.ಪ. ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರಿಮಕ್ಕಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net