ಚರ್ಮಗಂಟು ರೋಗ ಉಲ್ಬಣ

CHARMA GANTU
ಕುಷ್ಟಗಿ ತಾಲೂಕಿನ ಮುದೇನೂರು ಹಾಗೂ ದೋಟಿಹಾಳ ಭಾಗದಲ್ಲಿ ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗ.
Published on

ಕುಷ್ಟಗಿ: ತಾಲೂಕಿನ ಮುದೇನೂರು, ದೋಟಿಹಾಳ ಭಾಗದಲ್ಲಿ ಜಾನುವಾರುಗಳಿಗೆ ಚರ್ಮಗಂಟು (ಲಂಪಿಸ್ಕಿನ್) ರೋಗ ಕಾಣಿಸಿಕೊಂಡಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೆ ಜಾನುವಾರುಗಳು ಸಾಯುತ್ತಿವೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.

ಕೃಷಿ ಚಟುವಟಿಕೆಗೆ ಆಧಾರವಾಗಿರುವ ಎತ್ತು ಹಾಗೂ ಆದಾಯದ ಮೂಲವಾಗಿರುವ ಹಸುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾಯುತ್ತಿವೆ. ಪಶುಪಾಲನಾ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಕೃಷಿಕರು ದೂರಿದ್ದಾರೆ.

ತಾಲೂಕಿನ 18ಪಶು ಚಿಕಿತ್ಸಾಲಯಗಳಲ್ಲಿ ಕೇವಲ ಮೂವರು ಪಶುವೈದ್ಯರಿದ್ದಾರೆ. ಇವರಲ್ಲಿ ಒಬ್ಬರು ಸಹಾಯಕ ನಿರ್ದೇಶಕ, ಮತ್ತೊಬ್ಬರು ವಿಸ್ತೀರ್ಣಾಧಿಕಾರಿ ಹುದ್ದೆ ನಿಭಾಯಿಸುತ್ತಿದ್ದಾರೆ. ಬಹುತೇಕ ಚಿಕಿತ್ಸಾಲಯಗಳಲ್ಲಿ ಡಿ ದರ್ಜೆ ನೌಕರರೇ ವೈದ್ಯರಾಗಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೋಗಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿಲ್ಲ.

ಕೂಡಲೇ ಪಶುಪಾಲನಾ ಇಲಾಖೆ ಅಧಿಕಾರಿಗಳು ರೋಗ ಕಾಣಿಸಿಕೊಂಡ ಜಾನುವಾರುಗಳಿರುವ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಜತೆಗೆ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಆಗ್ರಹಿಸಿದ್ದಾರೆ.

ಕೃಷಿ ಚಟುವಟಿಕೆಗೆ ಆಧಾರವಾಗಲೆಂದು ಸಾಕಣೆ ಮಾಡಿದ್ದ ಎತ್ತು ಚರ್ಮಗಂಟು ರೋಗಕ್ಕೆ ಬಲಿಯಾಗಿದೆ. ಜಾನುವಾರುಗಳಿಗೆ ರೋಗಗಳು ಕಾಣಿಸಿಕೊಂಡಾಗ ಸಕಾಲಕ್ಕೆ ಚಿಕಿತ್ಸೆ ಸಿಗದಂತಾಗಿದೆ. ಸರ್ಕಾರ ನೀಡುವ ಪರಿಹಾರ ಮೊತ್ತದಲ್ಲಿ ದನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ತಾಲೂಕಿನ ಮಾದಾಪುರದ ರೈತ ದೊಡ್ಡಪ್ಪ ಕಮಲದಿನ್ನಿ ಅಳಲು ತೋಡಿಕೊಂಡಿದ್ದಾರೆ.

ಮಳೆಗಾಲ ನಂತರ ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಸೊಳ್ಳೆ, ನೊಣ ಹಾಗೂ ಉಣ್ಣೆಗಳಿಂದ ಹರಡುವ ರೋಗವಾಗಿರುವುದರಿಂದ ರೈತರು ಸೊಳ್ಳೆ ಪರದೆ ಇತರ ಮುಂಜಾಗ್ರತೆ ವಹಿಸಬೇಕು. ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಚರ್ಮಗಂಟು ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಅನುಗ್ರಹ ಯೋಜನೆ ಅಡಿ ಪರಿಹಾರ ಒದಗಿಸಲಾಗುವುದು. ಮಾದಾಪುರದ ರೈತನಿಗೂ ಪರಿಹಾರ ನೀಡಲಾಗುವುದು.ಡಾ.ಡಿ.ಆನಂದ್ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ, ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net