

ವಿಜಯವಾಣಿ ಸುದ್ದಿಜಾಲ ಬಂಗಾರಪೇಟೆ
ಕೋಚಿಮುಲ್ ಒಕ್ಕೂಟದ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷದಿಂದ ರೈತರ ಜೀವನಾಡಿಯಾಗಿರುವ ಹೈನೋದ್ಯಮಕ್ಕೆ ಪೆಟ್ಟಾಗಬಹುದು ಎಂಬ ಆತಂಕ ಹಾಲು ಉತ್ಪಾದಕರಲ್ಲಿ ಉಂಟಾಗಿದೆ.
ಕೋಚಿಮುಲ್ ಒಕ್ಕೂಟವು ಇಬ್ಬಾಗವಾದ ಕಾರಣ ನಿರ್ದೇಶಕರು ಕ್ಷೇತ್ರ ವಿಂಗಡಣೆಗೆ ಈ ಹಿಂದೆ ಸಹಕಾರ ಸಂಘಗಳ ಜಂಟಿ ನಿಬಂಧಕರಿಂದ ಕೆಲವು ಮಾನದಂಡಗಳಂತೆ ವಿಂಗಡಣೆ ಮಾಡಲು ಒಕ್ಕೂಟಕ್ಕೆ ಆದೇಶ ನೀಡಿತ್ತು. ಆದರೆ, ಒಕ್ಕೂಟದ ವ್ಯವಸ್ಥಾಪಕ ಗೋಪಾಲಮೂರ್ತಿ ಕ್ಷೇತ್ರ ವಿಂಗಡಣೆ ವಿಚಾರ ಯಾರ ಗಮನಕ್ಕೂ ತಾರದೇ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಕ್ಕೆ ಅವಕಾಶ ನೀಡದೆ ಪಟ್ಟಿ ತಯಾರಿಸಿ ಅಂಗೀಕಾರ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮೊದಲಿಗೆ ಆರೋಪ ಮಾಡಿ ಕೆಲವು ದಾಖಲೆ ಬಿಡುಗಡೆ ಮಾಡಿದ್ದರು. ಜತೆಗೆ ಅವರ ಬೆಂಬಲಿಗರೊಬ್ಬರು ಹೈಕೋರ್ಟ್ ಮೆಟ್ಟಿಲೇರಿ ಕ್ಷೇತ್ರ ವಿಂಗಡಣೆ ಸರಿಯಿಲ್ಲ, ಕೆಲವು ಲೋಪದೋಷಗಳು ಇವೆ ಎಂದು ಆರೋಪಿಸಿದ್ದರು. 5 ವರ್ಷಗಳ ಕಾಲ ಆಡಳಿತ ನಡೆಸಿದವರು ರಾಜೀನಾಮೆ ಕೊಟ್ಟು ಆಡಳಿತ ಮಂಡಳಿ ರದ್ದಾದ ನಂತರ ಈಗ ಬೀದಿಗೆ ಬಂದು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಕ್ಷೇತ್ರ ವಿಂಗಡಣೆ ವಿಚಾರವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಲ್ಲವನ್ನೂ ನೋಡುತ್ತಿದ್ದರೆ ಕ್ಷೇತ್ರ ವಿಂಗಡಣೆಯನ್ನು ಕೆಲವರು ಸ್ವಾರ್ಥಕ್ಕಾಗಿ ಮತ್ತು ಪ್ರತಿಷ್ಠೆಗಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿ ಬರುತ್ತಿದೆ.
ದಿವಾಳಿಯತ್ತ ಡಿಸಿಸಿ ಬ್ಯಾಂಕ್
ಈಗಾಗಲೇ ರೈತರಿಗೆ ಮತ್ತು ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದ ಡಿಸಿಸಿ ಬ್ಯಾಂಕ್ ಬೀದಿಗೆ ತಂದು ಬಿಟ್ಟಿದ್ದಾರೆ. ಕಳೆದ ಸುಮಾರು ಒಂದೂವರೆ ವರ್ಷದಿಂದ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆಸದೇ ಕೋರ್ಟ್ ಮೆಟ್ಟಿಲೇರಿರುವ ಕಾರಣ ಯಾರಿಗೂ ನಯಾಪೈಸೆ ಸಾಲ ವಿತರಣೆ ಆಗುತ್ತಿಲ್ಲ. ಇದರಿಂದ ಕೆಲವರು ಮುಂದೆ ಏನಾಗುತ್ತದೆಯೋ ಏನೋ ಡಿಸಿಸಿ ಬ್ಯಾಂಕ್ ಸಹವಾಸವೇ ಬೇಡ ಎಂದು ಠೇವಣಿ ಹಿಂಪಡೆಯಲು ಮುಂದಾಗಿದ್ದಾರೆ. ಚುನಾವಣೆ ಮುಂದೂಡುತ್ತಾ ಸಾಗಿದರೆ ಮತ್ತೆ ಡಿಸಿಸಿ ಬ್ಯಾಂಕ್ ದಿವಾಳಿಯತ್ತ ಸಾಗಬಹುದು ಎಂಬುದು ತಜ್ಞರ ಅಭಿಪ್ರಾಯವೂ ಆಗಿದೆ.
ಅಧಿಕಾರದಾಸೆಗೆ ಬೀದಿಗೆ ತಂದರು
ಈಗ ಡಿಸಿಸಿ ಬ್ಯಾಕ್ ಮಾದರಿಯಲ್ಲಿ ಕೋಚಿಮುಲ್ ಒಕ್ಕೂಟ ಸಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಜಿಲ್ಲೆಯಲ್ಲಿ ಸಾವಿರಾರು ಜನ ರೈತರು ಹೈನೋದ್ಯಮವನ್ನೇ ಮುಖ್ಯ ಕಸುಬು ಎಂದು ಬಾವಿಸಿದ್ದು, ಒಕ್ಕೂಟಕ್ಕೆ ಹಾಲ ಪೂರೈಸಿ ಬದುಕು ಕಟ್ಟಿಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೇ ಕೇವಲ ಅಭಿವೃದ್ಧಿಗಾಗಿ ಶ್ರಮಿಸಬೇಕು. ಆದರೆ, ಈಗ ಅಧಿಕಾರದ ಆಸೆ ಹಾಗೂ ಸ್ವಾರ್ಥಕ್ಕಾಗಿ ಕೆಲವರು ಕೋಚಿಮುಲ್ ಒಕ್ಕೂಟ ಕ್ಷೇತ್ರ ವಿಂಗಡಣೆ ನೆಪದಲ್ಲಿ ಬೀದಿಗೆ ತಂದು ನಿಲ್ಲಿಸಲು ಹೊರಟಿರುವುದು ವಿಷಾದದ ಸಂಗತಿ.
ಹೈನೋದ್ಯಮಕ್ಕೆ ಸಮಸ್ಯೆ
ದೂರದ ಬೆಟ್ಟ ನುಣ್ಣಗೆ ಎಂಬಂತೆ ಒಕ್ಕೂಟದಲ್ಲಿ ಎಲ್ಲವೂ ಸರಿ ಇದೆ ಎಂದು ಸಾರ್ವಜನಿಕರು ಭಾವಿಸಿದ್ದರು. ಆದರೆ ಈಗ ಶಾಸಕರೇ ಒಕ್ಕೂಟದಲ್ಲಿ ಅವ್ಯವಹಾರ ನಡೆಯುತ್ತಿದ್ದು, ತನಿಖೆ ಆಗಬೇಕು ಎಂದು ಆರೋಪಿಸುತ್ತಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೂ ಅನುಮಾನ ಕಾಡುವಂತೆ ಮಾಡಿದೆ. ಒಕ್ಕೂಟದಲ್ಲಿ ಆಡಳಿತ ಮಂಡಳಿ ಇಲ್ಲದಿದ್ದರೆ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗಬೇಕಾದ ಸೌಲಭ್ಯಗಳು ವಂಚಿತವಾಗಬಹುದು. ಇದರಿಂದ ಮುಂದೆ ಹಾಲು ಉತ್ಪಾದನೆಯಿಂದ ರೈತರು ಹಿಂದೇಟು ಹಾಕಲು ಮುಂದಾದರೆ ಹೈನೋದ್ಯಮಕ್ಕೆ ಸಮಸ್ಯೆ ಎದುರಾಗಬಹುದು. ಹಾಗಾಹಿ ಕೇತ್ರ ವಿಂಗಡಣೆ ವಿಚಾರಕ್ಕೆ ಇತಿಶ್ರೀ ಹಾಡಿ ಶೀಘ್ರ ಆಡಳಿತ ಮಂಡಳಿಯ ಚುನಾವಣೆ ನಡೆಸಿದರೆ ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಒಕ್ಕೂಟದ ಕ್ಷೇತ್ರ ವಿಂಗಡನೆ ಕೆಲವರು ಸ್ವಾರ್ಥಕ್ಕೆ ಮತ್ತು ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ತರದೇ ಕ್ಷೇತ್ರ ವಿಂಗಡಣೆ ಮಾಡಿ ಚುನಾವಣೆ ನಡೆಸಿದರೆ ಉತ್ತಮ. ಕ್ಷೇತ್ರ ವಿಂಗಡಣೆ ಈಗಾಗಲೇ ಕೊನೆ ಹಂತ ತಲುಪಿದ್ದು, ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಡೇರಿ ಅಧ್ಯಕ್ಷರ ಒಮ್ಮತ ಪಡೆದು ಚುನಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ.
- ವಿ.ಮಾರ್ಕಂಡೇಯಗೌಡ, ಡೇರಿ ಮಾಜಿ ಅಧ್ಯಕ್ಷ, ಬೂದಿಕೋಟೆ