

ಚಿಕ್ಕರಾಜು ದಾಬಸ್‌ಪೇಟೆ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಹಾಕಿದರಂತೆ ಎಂಬ ಮಾತಿದೆ. ಅದೇ ರೀತಿ ‘ಮನುಷ್ಯರಿಗೆ ರೋಗ ಬಂದರೆ ಜಾನುವಾರುಗಳಿಗೆ ಉಪವಾಸ’ ಎಂಬಂಥ ಹೊಸ ಪರಿಸ್ಥಿತಿ ಇಲ್ಲಿ ಎದುರಾಗಿದೆ.
ಕರೊನಾ ಕಾರಣದಿಂದ ಸೀಲ್‌ಡೌನ್ ಆದ ಮನೆಗಳ ಜಾನುವಾರುಗಳು ನೀರು, ಮೇವಿಲ್ಲದೆ ರೋದಿಸುತ್ತಿರುವ ಕರುಣಾಜನಕ ದೃಶ್ಯಕ್ಕೆ ಸೋಂಪುರ ಹೋಬಳಿಯ ವೀರಸಾಗರ ಸಾಕ್ಷಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೀರಸಾಗರದಲ್ಲಿ 4 ದಿನಗಳ ಹಿಂದೆ 55 ವರ್ಷದ ಮಹಿಳೆ ಕರೊನಾದಿಂದ ಮೃತಪಟ್ಟಿದ್ದಾರೆ. ಬಳಿಕ ಆಕೆಯ ಸಂಪರ್ಕದಲ್ಲಿದ್ದ 12 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮಹಿಳೆ ಮನೆ ಸೇರಿ ಸಂಬಂಧಿಕರ ಮನೆಗಳು ಸೀಲ್‌ಡೌನ್ ಆಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ್ವಾರಂಟೈನ್ ಮಾಡುವಾಗ ಈ ಮನೆಗಳ ಜಾನುವಾರುಗಳ ಸ್ಥಿತಿಗತಿ ಯೋಚಿಸಲಿಲ್ಲ. ಅವೆಲ್ಲ ಅಲ್ಲೇ ಇವೆ. ಸೀಲ್‌ಡೌನ್ ಇರುವುದರಿಂದ ಯಾರೂ ಹೋಗುವಂತಿಲ್ಲ. ಪರಿಣಾಮವಾಗಿ ಮೂಕ ಪ್ರಾಣಿಗಳು ನೀರು, ಮೇವಿಲ್ಲದೆ ಪರಿತಪಿಸುತ್ತಿವೆ. ಜಾನುವಾರುಗಳ ಪರಿಸ್ಥಿತಿ ನೋಡಲಾರದೆ ನೆರೆ-ಹೊರೆಯ ಕೆಲವರು ಮೇವು ಹಾಕುತ್ತಿದ್ದರೂ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಸಿಗುತ್ತಿಲ್ಲ.
ಹಾಲು ಕರೆಯಲೂ ಹಿಂದೇಟು: ಕರೊನಾ ಹರಡುವ ಆತಂಕದಿಂದ ಜನರು ಸ್ಥಳಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಸೀಲ್‌ಡೌನ್ ಆಗಿರುವ ಕುಟುಂಬಸ್ಥರ ರಾಸುಗಳಿಂದ ಪ್ರತಿದಿನ ಸುಮಾರು 60 ಲೀಟರ್ ಹಾಲು ಸಂಗ್ರಹವಾಗುತ್ತದೆ. ಈ ಹಾಲು ಖರೀದಿಗೆ ಡೇರಿಯವರು ನಿರಾಕರಿಸುತ್ತಿದ್ದಾರೆ. ಹಾಲು ಕರೆಯಲೂ ಜನ ಹಿಂದೇಟು ಹಾಕುತ್ತಿದ್ದಾರೆ.
ಊರು ಖಾಲಿ ಮಾಡೋ ಚಿಂತನೆ: ಗ್ರಾಮದ ಮಹಿಳೆ ಕರೊನಾನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮದ ಅನೇಕರು ಊರು ತೊಯಲು ಸಿದ್ಧತೆ ನಡೆಸುತ್ತಿದ್ದಾರೆ. ಕರೊನಾ ಹರಡುವ ಭೀತಿಯಲ್ಲಿಯೆ ಗ್ರಾಮಸ್ಥರು ದಿನದೂಡುತ್ತಿದ್ದಾರೆ. ತಾಲೂಕು ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಊರಿನ ಜನರಿಗೆ ಕರೊನಾ ಮಾರಿ ದುಸ್ವಪ್ನದಂತೆ ಕಾಡುತ್ತಿದೆ.
ಜಾನುವಾರುಗಳ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ಕೂಡಲೇ ಪಶುಪಾಲನೆ ಇಲಾಖೆ ಸ್ಪಂದಿಸಲಿದೆ. ಈ ಬಗ್ಗೆ ಗ್ರಾಮದ ಯಾರಾದರೂ ಮಾಹಿತಿ ನೀಡಿದರೆ ಸಾಕು. ಕರೊನಾ ಸೋಂಕು ಪ್ರಾಣಿಗಳಿಗೆ ತಗುಲುವುದಿಲ್ಲ. ಈ ಬಗ್ಗೆ ಅನಗತ್ಯ ಆತಂಕ ಬೇಡ. ಡಾ.ಅನಿಲ್‌ಕುಮಾರ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬೆಂ.ಗ್ರಾಮಾಂತರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಕ್ವಾರಂಟೈನ್‌ನಲ್ಲಿರುವ ಕುಟುಂಬದ ಜಾನುವಾರುಗಳಿಗೆ ನೆರೆಹೊರೆಯವರು ನೀರು, ಮೇವು ಪೂರೈಸುತ್ತಿದ್ದಾರೆ. ಆದರೆ ಸಾಕಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಈ ಬಗ್ಗೆ ತಾಲೂಕು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ