ಮೈಸೂರು ಜಿಲ್ಲೆಯಲ್ಲಿ ಜಾನುವಾರು ಗಣತಿ ಶುರು

livestock-census-begins-in-mysore-district
Published on

ಮೈಸೂರು: ಜನಸಮುದಾಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಜನಗಣತಿ ಅತ್ಯಂತ ಮುಖ್ಯ. ಅದೇ ರೀತಿ ಹೈನುಗಾರಿ ಕೆಯಲ್ಲಿ ತೊಡಗಿರುವ ರೈತರಿಗೆ ಪೂರಕವಾದ ಯೋಜನೆಗಳನ್ನು ಜಾರಿಗಳಿಸಲು ಜಾನುವಾರುಗಳ ಗಣತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯಲ್ಲಿ ಜಾನುವಾರುಗಳ ಗಣತಿ ಪ್ರಾರಂಭಗೊಂಡಿದೆ.

ಜಿಲ್ಲೆಯಲ್ಲಿ ಅ.29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜಾನುವಾರುಗಳ ಗಣತಿಗೆ ಚಾಲನೆ ನೀಡಿದ್ದಾರೆ. ಗಣತಿಯು ಫೆಬ್ರವರಿ ತಿಂಗಳವರೆಗೆ ನಡೆಯಲಿದೆ. ನಾಲ್ಕು ತಿಂಗಳ ಕಾಲ ನಡೆಯುವ ಗಣತಿಯಲ್ಲಿ ಗಣತಿದಾರರು ರೈತರ ಬಳಿ ತೆರಳಿ ಅವರು ಸಾಕಿರುವ ಜಾನುವಾರುಗಳ ಗಣತಿ ಮಾಡಲಿದ್ದಾರೆ. ಈ ಗಣತಿಯಿಂದ ಜಿಲ್ಲೆಯಲ್ಲಿ ಜಾನುವಾರು ಗಳ ನಿಖರವಾದ ಮಾಹಿತಿ ದೊರೆಯಲಿದೆ.

ಗಣತಿಯ ಸಂದರ್ಭದಲ್ಲಿ ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು, ಆಸ್ಟ್ರಿಚ್ ಪಕ್ಷಿಗಳ ಮಾಹಿತಿಗಳನ್ನು ಪಡೆಯಲಾಗುವುದು. ಇಷ್ಟು ಮಾತ್ರವಲ್ಲದೆ ಬಿಡಾಡಿ ಜಾನುವಾರುಗಳು ಹಾಗೂ ನಾಯಿಗಳ ಮಾಹಿತಿಯನ್ನು ಸಹ ಸಂಗ್ರಹಿಸ ಲಾಗುವುದು. ಗೋಶಾಲೆಗಳಿದ್ದರೆ ಅದರ ಮಾಹಿತಿಯನ್ನು ಸಹ ಸಂಗ್ರಹಿಸಲಾಗುವುದು. 10ಕ್ಕಿಂತ ಹೆಚ್ಚು ಹಸು, ಎತ್ತುಗಳು, ಎಮ್ಮೆ, ಕೋಣಗಳು ಇದ್ದರೆ, 1000ಕ್ಕಿಂತ ಹೆಚ್ಚು ಕೋಳಿಗಳು ಇದ್ದರೆ ಹಾಗೂ 50ಕ್ಕೂ ಹೆಚ್ಚು ಆಡು, ಕುರಿಗಳು ಇದ್ದರೆ ಅದನ್ನು ಫಾರಂ ಎಂದು ಪರಿಗಣಿಸಲಾಗುತ್ತದೆ.

ಗಣತಿಯಲ್ಲಿ ಯಾವ ತಳಿಯ ಜಾನುವಾರುಗಳು ಎಷ್ಟು ಸಂಖ್ಯೆಯಲ್ಲಿ ಇವೆ ಎಂಬ ಮಾಹಿತಿ ಕಲೆ ಹಾಕಲಾಗುವುದು. ಹೈಗಾರಿಕೆಯಲ್ಲಿ ಎಷ್ಟು ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಈ ಪೈಕಿ ಮಹಿಳೆಯ ಸಂಖ್ಯೆ ಎಷ್ಟು ಎಂಬ ಮಾಹಿತಿ ದೊರೆಯಲಿದೆ. ಈ ಅಂಕಿ ಅಂಶದ ಆಧಾರದ ಮೇಲೆ ಸರ್ಕಾರ ಮುಂದಿನ ಯೋಜನೆಗಳನ್ನು ಸಿದ್ಧಪಡಿಸಲು ಸಹಕಾರಿಯಾಗಲಿದೆ. ರೈತರು ಹಾಗೂ ಹೈನುಗಾರಿಕೆಗೆ ಪೂರಕವಾದ ನೀತಿ ರೂಪಿಸಲು ಈ ಅಂಕಿ ಅಂಶ ಪೂರಕವಾದ ಮಾಹಿತಿಯನ್ನು ಒದಗಿಸಲಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಶುಸಂಗೋಪನೆಯ ಮೂಲಕವೇ ಬದುಕನ್ನು ರೂಪಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 1,102 ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, ವರ್ಷದಿಂದ ವರ್ಷಕ್ಕೆ ಹಾಲು ಉತ್ಪಾದಕರ ಸಂಖ್ಯೆ ಹಾಗೂ ಹಾಲಿನ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. 2017ಕ್ಕೂ ಮುನ್ನ ಪ್ರತಿ ದಿನ 5.5 ಲಕ್ಷ ಲೀಟರ್ ಹಾಲು ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ (ಮೈಮುಲ್) ಬರುತಿತ್ತು. ಆದರೆ, 2021-22ರ ವೇಳೆಗೆ ಈ ಪ್ರಮಾಣವು 7.5 ಲಕ್ಷ ಲೀಟರ್‌ಗೆ ಏರಿಕೆ ಕಂಡಿತು. ಇದೀಗ ಪ್ರತಿದಿನ 9.5 ಲಕ್ಷದಿಂದ 10 ಲಕ್ಷ ಲೀಟರ್‌ವರೆಗೆ ಹಾಲನ್ನು ಮೈಮುಲ್ ಸಂಗ್ರಹಿಸುತ್ತಿದೆ. ಈ ಅಂಕಿ ಅಂಶಗಳು ಜಿಲ್ಲೆಯ ಜನರು ಹೈನುಗಾರಿಕೆಯನ್ನು ಎಷ್ಟೊಂದು ಅವಲಂಬಿಸಿದ್ದಾರೆ ಎಂಬುದುಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಅಂಕಿ ಅಂಶಗಳಿಂದ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಹಲವು ಯೋಜನೆಗಳನ್ನು ಜಾರಿಗೆ ತರಲು ಸಹಕಾರಿಯಾಗಲಿದೆ.

ಜಾನುವಾರು ಗಣತಿಯನ್ನು 1919ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿ 5 ವರ್ಷಗಳಿಗೆ ಒಮ್ಮೆ ಗಣತಿ ನಡೆಸಲಾಗುತ್ತಿದೆ. ಇದುವರೆಗೆ 20 ಗಣತಿ ನಡೆದಿದ್ದು, ಇದೀಗ 21ನೇ ಗಣತಿ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ 150 ಸಿಬ್ಬಂದಿಯನ್ನು ಗಣತಿಗೆ ನಿಯೋಜಿ ಸಲಾಗಿದೆ. ಮೇಲ್ವಿಚಾರಣೆಗೆ 35 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಗಣತಿಯ ಒಟ್ಟು ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.

ಇದುವರೆಗೆ ನಡೆದ ಗಣತಿಯಲ್ಲಿ ಗಣತಿದಾರರು ಮಾಹಿತಿ ಸಂಗ್ರಹಿಸಿ ಅದನ್ನು ಪುಸ್ತಕದಲ್ಲಿ ದಾಖಲಿಸುತ್ತಿದ್ದರು. ಆದರೆ, ಈ ಬಾರಿ ನಡೆಯುತ್ತಿರುವ ಗಣತಿಯು ಸಂಪೂರ್ಣ ಡಿಜಿಟಲೀಕರಣಗೊಂಡಿದ್ದು, ಇದಕೋಸ್ಕರ ಕೇಂದ್ರ ಪಶುಸಂಗೋಪನಾ ಇಲಾಖೆಯು ‘21ನೇ ಲೈವ್ ಸ್ಟಾಕ್ ಸೆನ್ಸಸ್’ ಎಂಬ ಆ್ಯಪ್‌ಅನ್ನು ಅಭಿವೃದ್ಧಿಪಡಿಸಿದೆ. ಗಣತಿದಾರರು ತಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ನಲ್ಲಿ ಆ್ಯಪ್‌ಅನ್ನು ಡೌನ್‌ಲೋಡ್ ಮಾಡಿಕೊಂಡು ಅಂಕಿ ಅಂಶಗಳನ್ನು ಅಪ್‌ಲೋಡ್ ಮಾಡಬಹುದು. ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲೂ ಈ ಆ್ಯಪ್ ಕಾರ್ಯನಿರ್ವಹಿಸುತ್ತದೆ ಎಂಬುದು ವಿಶೇಷವಾಗಿದೆ. ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಗಣತಿ ನಡೆಸಿ ನಂತರ ನೆಟ್‌ವರ್ಕ್ ಪ್ರದೇಶಕ್ಕೆ ಬಂದ ಕೂಡಲೇ ಸಂಗ್ರಹಿಸಿದ ಮಾಹಿತಿ ತಕ್ಷಣ ಕೇಂದ್ರ ಸರ್ವರ್‌ಗೆ ಹೋಗಲಿದೆ. ಆ್ಯಪ್ ಬಳಕೆಯ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಆ್ಯಪ್ ಬಳಕೆಯಿಂದ ಈ ಬಾರಿಯ ಗಣತಿ ಮತ್ತಷ್ಟು ಸುಲಲಿತವಾಗಿ ನಡೆಯುವ ನಿರೀಕ್ಷೆ ಹೊಂದಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಜಾನುವಾರು ಗಣತಿಗೆ ಚಾಲನೆ ದೊರೆತ್ತಿದೆ. ನಾಲ್ಕು ತಿಂಗಳ ಅವಧಿಯಲ್ಲಿ ಗಣತಿ ಪೂರ್ಣಗೊಳಿ ಸುವ ಉದ್ದೇಶ ಹೊಂದಲಾಗಿದೆ. ಇದಕೋಸ್ಕರ ತಂಡ ರಚನೆ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ಬುಧವಾರ ಮತ್ತೊಂದು ಸುತ್ತಿನ ಮಾರ್ಗದರ್ಶನವನ್ನು ಗಣತಿದಾರರಿಗೆ ನೀಡಲಾಗುವುದು. ಜಾನುವಾರುಗಳಿಗೆ ನವೆಂಬರ್ ತಿಂಗಳಿನಲ್ಲಿ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಕೈಗೊಂಡ ಹಿನ್ನೆಲೆಯಲ್ಲಿ ಗಣತಿ ಸ್ವಲ್ಪ ವಿಳಂಬವಾಗಿದೆ. ಆದರೆ, ನಿಗದಿ ಪಡಿಸಿದ ಅವಧಿಯೊಳಗೆ ಗಣತಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇವೆ.

ಡಾ.ನಾಗರಾಜ್, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net