

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕುತೂಹಲ, ಗೆಳೆಯರ ಒತ್ತಾಯ, ಸಂತೋಷ ಕೂಟ, ಬೇಸರ, ಒತ್ತಡ ಇತ್ಯಾದಿ ಕಾರಣಗಳಿಂದ ಆರಂಭಗೊಳ್ಳುವ ಮಾದಕ ದ್ರವ್ಯ ಸೇವನೆ ಚಟವಾಗಿ ಪರಿಣಮಿಸಿ ನಮ್ಮ ಬದುಕನ್ನೇ ನಾಶಮಾಡುತ್ತದೆ ಎಂದು ಯೇನೆಪೊಯ ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ರಾಜೇಶ್ ಅಭಿಪ್ರಾಯಪಟ್ಟರು.
ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಮಾಜಿಕ ಸ್ವಾಸ್ಥೃ ಹಾಗೂ ಸಾಮರಸ್ಯ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಣಾಜೆ ಪೊಲೀಸ್ ಠಾಣೆ ಉಪನಿರೀಕ್ಷಕ ಪುನೀತ್ ಗಾಂವ್ಕರ್ ಮಾತನಾಡಿ, ಕುತೂಹಲ ಸಹವಾಸದಿಂದ ಆರಂಭವಾಗುವ ವ್ಯಸನ, ಕಳ್ಳತನ, ಮಾರಾಟ, ಇನ್ನೊಬ್ಬರಿಗೆ ಪ್ರೇರಣೆ. ಹೀಗೆ ವಿವಿಧ ಹಂತಗಳಲ್ಲಿ ಮುಂದುವರಿದು ಕೊನೆಗೆ ಜೈಲು ಶಿಕ್ಷೆಯವರೆಗೆ ತಲುಪುವುದರಿಂದ ವಿದ್ಯಾರ್ಥಿಗಳು ಜಾಗೃತರಾಗಿದ್ದು, ತಮ್ಮ ಪರಿಸರದಲ್ಲಿ ಇಂತಹ ವ್ಯಸನಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಉಳ್ಳಾಲ ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ.ಕಲ್ಲಿಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಆಳ್ವ, ಕಾರುಣ್ಯ ಕೇಂದ್ರದ ಸಂಚಾಲಕ ರಿಝ್ವನ್ ಅಝ್ಹರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೆಡ್ಕ್ರಾಸ್ ಸಂಚಾಲಕ ಪ್ರೊ.ಹೈದರಾಲಿ, ಶಿಕ್ಷಕ-ರಕ್ಷಕ ಸಂಘ ಸಂಚಾಲಕ ಪ್ರೊ.ಪವನ ಬಿ.ಪಿ., ಆಂತರಿಕ ಭದ್ರತಾ ಕೋಶ ಸಂಚಾಲಕಿ ಕವಿತಾ ಎಂ.ಎಲ್., ಕ್ಷೇಮ ಪಾಲನಾ ಅಧಿಕಾರಿ ಡಾ.ಶೇಷಪ್ಪ ಉಪಸ್ಥಿತರಿದ್ದರು.
ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿದರು. ಇಸಾಕ್ ಕಲ್ಲಾಪು ವಂದಿಸಿದರು. ಪ್ರಾಧ್ಯಾಪಕಿ ಅನ್ನಪೂರ್ಣ ಸುವರ್ಣ ನಿರೂಪಿಸಿದರು.