ರೇಷ್ಮೆ ಕೃಷಿಕರ ಬದುಕು ಅತಂತ್ರ, ನೆರವಿನ ನಿರೀಕ್ಷೆಯಲ್ಲಿ ರೈತರು, ರೀಲರ್‌ಗಳು ಬೆಲೆ ಕುಸಿತ ತಂದ ಆತಂಕ

18-vij-5a-reshme hita kapadalu ottaya
Published on

ವಿಜಯಪುರ: ಲಾಕ್‌ಡೌನ್‌ನಿಂದಾಗಿ ರೈತರು ಹಾಗೂ ರೀಲರ್‌ಗಳ ಜೀವನ ಅತಂತ್ರವಾಗಿದೆ. ಈಗಾಗಲೇ ಸಾಕಷ್ಟು ರೀಲರ್‌ಗಳು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಹಿಪ್ಪು ನೇರಳೆ ಸೊಪ್ಪು ಬೆಳೆಯುವ ರೈತನಿಂದ ಹಿಡಿದು, ರೇಷ್ಮೆ ಸೀರೆ ಮಾರಾಟಗಾರರವರೆಗೂ ಹತ್ತು ಹಲವಾರು ಹಂತಗಳಲ್ಲಿ ಲಕ್ಷಾಂತರ ಮಂದಿ ರೇಷ್ಮೆ ಉದ್ದಿಮೆ ನಂಬಿಕೊಂಡಿದ್ದು, ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕೋಟ್ಯಂತರ ರೂ. ಆದಾಯ ಬರುತ್ತಿತ್ತು. ಆದರೆ ಈಗ ಉದ್ದಿಮೆ ಸಂಕಷ್ಟದ ಸ್ಥಿತಿಯಲ್ಲಿದೆ.

ಸರ್ಕಾರ ನೆರವಿನ ಭರವಸೆ ನೀಡಿದರೂ ಎಂದೋ ದೊರೆಯುವ ಸಹಾಯಕ್ಕೆ ರೇಷ್ಮೆ ಕೃಷಿ ಅವಲಂಬಿತರು ಕಾಯುವಂತಾದರೆ ಮತ್ತಷ್ಟು ನಷ್ಟ ಹೆಚ್ಚುವ ಸಂಭವವಿದೆ.

ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರೇಷ್ಮೆಗೂಡು ಪ್ರತಿ ಕೆಜಿಗೆ 530 ರೂ. ವರೆಗೆ ಮಾರಾಟವಾಗುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ರೇಷ್ಮೆ ವ್ಯವಹಾರ ಸಂಪೂರ್ಣ ನೆಲಕಚ್ಚಿದ್ದು, ಸಾಗಣೆ, ಮಾರಾಟ ಎಲ್ಲದರ ಮೇಲೆ ಪರಿಣಾಮ ಬೀರಿದೆ. ಈಗ ಪ್ರತಿ ಕೆಜಿ ರೇಷ್ಮೆ 150 ರೂ.ಗೆ ಕುಸಿದಿದ್ದು, ರೇಷ್ಮೆ ಗೂಡು ಕಟ್ಟುವ ಮುನ್ನವೇ ಅದನ್ನು ತಿಪ್ಪೆಗೆ ಎಸೆಯುವ ಸ್ಥಿತಿ ಎದುರಾಗಿದೆ.

ಪ್ರತಿಯೊಬ್ಬ ಕೆಜಿ ರೇಷ್ಮೆಗೂಡು ಬೆಳೆಯಲು ಕನಿಷ್ಠ 300 ರೂ.ವರೆಗೆ ವೆಚ್ಚ ತಗಲುವುದು. ಬಿಚ್ಚಾಣಿಕೆದಾರರು ರೇಷ್ಮೆ ತಯಾರಿಸಲು ಪ್ರತಿ ಕೆಜಿಗೆ 3000 ರೂ. ವರೆಗೂ ವೆಚ್ಚ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿ) ನಿಯಮ ಸಡಿಲ ಮಾಡಿ, ರೀಲರ್‌ಗಳ ಬಳಿ ಸೂಕ್ತ ದರಕ್ಕೆ ರೇಷ್ಮೆ ಕೊಂಡರೆ ಎಲ್ಲರಿಗೂ ಇದರ ಪ್ರಯೋಜನ ದೊರಕಲಿದೆ.

ಪರಿಸ್ಥಿತಿಯ ಲಾಭ: ಬಹಳಷ್ಟು ಉದ್ದಿಮೆದಾರರು ಹಾಗೂ ಬಂಡವಾಳ ಶಾಹಿಗಳು ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು, 1800-2000 ರೂ.ಗಳಿಗೆ ಪ್ರತಿ ಕೆಜಿಯಂತೆ ರೇಷ್ಮೆಕೊಂಡು, ದಾಸ್ತಾನು ಮಾಡಿಕೊಂಡಿದ್ದು, ಮಾರುಕಟ್ಟೆ ಸಹಜ ಸ್ಥಿತಿಗೆ ಬಂದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಂಭವವೂ ಇದೆ.

ಬೇಡಿಕೆ ಕುಸಿದಿಲ್ಲ: ರೇಷ್ಮೆಗೆ ಈಗಲೂ ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದ್ದು, ಲಾಕ್‌ಡೌನ್‌ನಿಂದಾಗಿ ಅಂತಾರಾಜ್ಯ ಪ್ರಯಾಣ ಸಾಧ್ಯವಿಲ್ಲ. ಹೊರ ರಾಜ್ಯಗಳಿಗೆ ರೇಷ್ಮೆತೆಗೆದುಕೊಂಡು ಹೋಗಲು ರೇಷ್ಮೆ ಇಲಾಖೆ ಪ್ರತಿಯೊಬ್ಬ ರೀಲರುಗಳಿಗೂ ಪಾಸ್ ನೀಡಲು ಮುಂದಾಗಿದೆ. ಆದರೆ ಸಣ್ಣ, ಪುಟ್ಟ, ರೀಲರು 30-50 ಕೆಜಿ ರೇಷ್ಮೆ ತೆಗೆದುಕೊಂಡು ಹೋಗಿ, ಮಾರಾಟ ಮಾಡಿದರೆ ಸಾಗಣೆ ವೆಚ್ಚ ಕೂಡ ಬರುವುದಿಲ್ಲ. ಸಾಗಾಟದ ಸಂದರ್ಭದಲ್ಲಿ ಭದ್ರತೆ ಸಹ ಪ್ರಮುಖವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಭರವಸೆ ನೀಡುವ ಬದಲು ತಕ್ಷಣವೇ ಬೆಂಬಲ ಬೆಲೆಯಲ್ಲಿ ರೇಷ್ಮೆ ಖರೀದಿಸಬೇಕಿದೆ.

ರೀಲರ್‌ಗಳ ಹಿತ ಕಾಯಲು ಕೆಎಸ್‌ಎಂಬಿಯಿಂದ ನಿಬಂಧನೆಗಳಿಲ್ಲದೆ ರೇಷ್ಮೆ ಕೊಳ್ಳುವಂತಾಗಬೇಕು. ಸರ್ಕಾರ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಸಯ್ಯದ್ ಹುಸೇನ್ ಸಾಬ್ ರೀಲರ್, ವಿಜಯಪುರ ಈ ಹಿಂದೆ ಬಯಲು ಸೀಮೆಯ ರೈತರು ಸಿಲ್ಕ್-ಮಿಲ್ಕ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಮಾರುಕಟ್ಟೆಯಲ್ಲಿ ಕೇವಲ ಹರಾಜಾದ ಕೆಲವೇ ಗಂಟೆಗಳಲ್ಲಿ ರೈತನಿಗೆ ಹಣ ದೊರೆಯುತ್ತಿತ್ತು. ಆದರೆ ಆಗಿಂದಾಗ್ಗೆ ಪ್ರಕೃತಿ ಹಾಗೂ ಪರಿಸ್ಥಿತಿಗಳ ವಿಕೋಪದಿಂದ ರೈತನ ಶ್ರಮಕ್ಕೆ ತಕ್ಕಂತಹ ಬೆಲೆ ಸಿಗುವುದಿಲ್ಲ. ಈ ಪರಿಸ್ಥಿತಿ ಸುಧಾರಣೆಯಾಗಬೇಕು. ಮುನಿರಾಜು, ರೈತ, ಬೀಡಿಗಾನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net