ಚಾರಿತ್ರ್ಯಂತರಾಗಿ ಬದುಕಿ ಕನಸು ನನಸು ಮಾಡಿಕೊಳ್ಳಿ

23NRGL2
Published on

ನರೇಗಲ್ಲ: ನೀವು ಕಾಲೇಜಿಗೆ ಬರುತ್ತಿರುವುದು ಅಧ್ಯಯನ ಮಾಡಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು. ನಿಮ್ಮ ಗುರಿ ಅದಷ್ಟೇ ಆಗಿರಬೇಕೇ ಹೊರತು ಅನ್ಯ ಕಾರ್ಯಗಳತ್ತ ನಿಮ್ಮ ಮನಸನ್ನು ಹರಿಬಿಟ್ಟರೆ ನೀವು ಜೀವನದಲ್ಲಿ ಖಂಡಿತ ಸೋಲುತ್ತೀರಿ. ನೀವೆಂದಿಗೂ ಜೀವನದಲ್ಲಿ ಸೋಲಬಾರದು ಎಂದು ನರೇಗಲ್ಲ ಠಾಣೆ ಪಿಎಸ್​ಐ ಐಶ್ವರ್ಯ ನಾಗರಾಳ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜ್​ನಲ್ಲಿ ಬುಧವಾರ ಏರ್ಪಡಿಸಿದ್ದ ಹೊಸ ಕಾನೂನುಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಮ್ಮ ತಂದೆ-ತಾಯಿ ನಿಮ್ಮ ಭವಿಷ್ಯದ ಬಗ್ಗೆ ಅದೆಷ್ಟೋ ಕನಸು ಕಟ್ಟಿಕೊಂಡಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಜೀವನವನ್ನೇ ಒತ್ತೆ ಇಟ್ಟಿರುತ್ತಾರೆ. ನಮ್ಮ ಮಗ- ಮಗಳು ವಿದ್ಯಾಭ್ಯಾಸ ಕಲಿತು ದೊಡ್ಡ ನೌಕರಿ ಮಾಡುತ್ತಾರೆ. ಇದರಿಂದ ನಮ್ಮ ಬಾಳು ಬಂಗಾರವಾಗುತ್ತದೆ. ನಮ್ಮ ಬಡತನದ ಬದುಕು ದೂರವಾಗುತ್ತದೆ ಎಂದು ನಂಬಿರುತ್ತಾರೆ. ಅಂತಹ ಸಮಯದಲ್ಲಿ ನೀವು ಪ್ರೀತಿ-ಪ್ರೇಮ ಅಥವಾ ದುಶ್ಚಟಗಳಿಗೆ ಬಲಿಯಾದರೆ ಅವರ ಕನಸು ಕಮರಿ ಹೋಗುತ್ತದೆ. ಹೀಗಾಗಿ ನಿಮ್ಮ ಜೀವನದ ಗುರಿ ಸಾಧಿಸಲು, ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಶ್ರದ್ಧೆಯಿಂದ ಪ್ರಯತ್ನಿಸಬೇಕು ಎಂದು ಐಶ್ವರ್ಯ ನಾಗರಾಳ ಹೇಳಿದರು.

ಇದೇ ವೇಳೆ ಅವರು, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು. ನಂತರ ವಿದ್ಯಾರ್ಥಿಗಳು ಕೇಳಿದ ಅನೇಕ ಸಂದೇಹಗಳಿಗೆ ಸೂಕ್ತ ಪರಿಹಾರ ನೀಡಿದರು. ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net