ಸರ್ಕಾರದ ಸೌಲಭ್ಯದೊಂದಿಗೆ ಇತರರಂತೆ ಬದುಕಿ: ವರ್ಣಿತ್ ನೇಗಿ

Varnith negi CEO
Published on

ಮಡಿಕೇರಿ: ವಿಶೇಷ ಚೇತನರು ಸರ್ಕಾರದ ಸೌಲಭ್ಯ ಬಳಸಿಕೊಂಡು ಇತರರಂತೆ ಬದುಕಬೇಕು ಎಂದು ಜಿ.ಪಂ.ಸಿಇಒ ವರ್ಣಿತ್ ನೇಗಿ ಹೇಳಿದರು.
ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ವಿಶೇಷ ಚೇತನರಿಗಾಗಿ ಎಲ್ಲಾ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿನ ಶೇ.೫ ರಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ. ಈ ಅನುದಾನದ ಉಪಯೋಗ ಪಡೆದುಕೊಳ್ಳುವಂತೆ ಹಾಗೂ ಸರ್ಕಾರದಿಂದ ದೊರೆಯುವ ಸಾಧನ ಸಲಕರಣೆಗಳು, ಪಿಂಚಣಿ ಇತ್ಯಾದಿ ಸೌಲಭ್ಯ ಪಡೆದುಕೊಳ್ಳಬೇಕು. ಹಾಗೆಯೇ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಲೈಬ್ರರಿಯ ವ್ಯವಸ್ಥೆ ಕೂಡ ವಿಶೇಷ ಚೇತನರಿಗೆ ಮಾಡಲಾಗಿದೆ. ವೋಟರ್ ಹೆಲ್ಪ್‌ಲೈನ್‌ನಲ್ಲಿ ಆಧಾರ್ ಕಾರ್ಡನ್ನು ನೋಂದಣಿ ಮಾಡಿಕೊಂಡಲ್ಲಿ ಚುನಾವಣೆಗಳಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.


ವಕೀಲ ವೈಧ್ಯನಾಥ್ ಮಾತನಾಡಿ, ವಿಶೇಷ ಚೇತನರಿಗಾಗಿ ಕಾನೂನು ರೂಪಿಸುವ ಸಲುವಾಗಿ ವಿಶೇಷ ಚೇತನರ ಕಾಯ್ದೆ ಜಾರಿಗೆ ಬಂದಿದೆ. ಇದರಿಂದ ವಿಕಲಚೇತನರ ಹಕ್ಕು ಪೋಷಣೆ ಮಾಡುವುದು ೨೦೧೬ರ ಆರ್‌ಪಿಡಬ್ಲ್ಯುಡಿ ಆಕ್ಟ್ ಜಾರಿಗೆ ಬಂದಿದೆ. ಇದರಿಂದ ಸಮಾಜದಲ್ಲಿ ಇತರರಂತೆ ಬದುಕುವ ಅವಕಾಶ ನೀಡಿದೆ. ವಿಕಲಚೇತನರ ಹಕ್ಕನ್ನು ಕಸಿಯುವ ಅವಕಾಶ ಬಂದರೆ ಪ್ರಶ್ನೆ ಮಾಡಲು ಈ ಕಾಯ್ದೆ ಉಪಯೋಗಕಾರಿಯಾಗಿದೆ. ಅವರಿಗಾಗಿ ವಿಶೇಷ ನ್ಯಾಯಾಲಯವಿದೆ ಹಕ್ಕಿಗೆ ಚ್ಯುತಿ ಬಂದಲ್ಲಿ ಪ್ರಶ್ನೆ ಮಾಡುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸಾರ್ವಜನಿಕ ಸ್ಥಳದಲ್ಲಿ ವಿಶೇಷವಾಗಿ ರ‌್ಯಾಂಪ್ ನಿರ್ಮಾಣ ಮಾಡುವುದು ಸರ್ಕಾರಿ ಕಚೇರಿಗಳಲ್ಲಿ ಮೀಸಲಾತಿ ಒದಗಿಸುವದು ವಿಶೇಷ ಸಾಮಾಜಿಕ ಭದ್ರತೆ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಉಚಿತ ಕಾನೂನು ಸೇವಾ ಪ್ರಾಧಿಕಾರವಿದೆ ಅದಕ್ಕಾಗಿ ನೇಮಕ ಮಾಡಲಾಗುತ್ತದೆ ಎಂದರು.


ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಡಾ.ಜಿ.ಎಸ್.ಕುಮಾರ್ ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ವಿಶೇಷ ಚೇತನರಿಗೆ ಒದಗಿಸುವಲ್ಲಿ ಮತ್ತಷ್ಟು ಶ್ರಮಿಸಬೇಕು ಎಂದರು.


ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ಪ್ರತಿನಿಧಿಸಿದ ಹಸನ್ ಹೊಸಕೇರಿ ಹಾಗೂ ಉತ್ತಮವಾಗಿ ಕೆಲಸ ನಿರ್ವಹಿಸುವಂತಹ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಮತ್ತು ಇಲಾಖೆಯ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ಹಾಗೂ ವಿವಿಧ ಯೋಜನೆಗಳ ಬಾಂಡ್‌ಗಳನ್ನು ವಿತರಿಸಲಾಯಿತು.


ವಿಶೇಷಚೇತನ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಆಯುಷ್ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ವಿಕಲಚೇತನ ಕಲ್ಯಾಣಾಧಿಕಾರಿ ವಿಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net