ಎತ್ತಿನಗಾಡಿಯ ಗಾಲಿಗಳಂತೆ ಬದುಕು ನಡೆಸಿ

Dvd Swamiji
ದೇವದುರ್ಗದ ಅರಿವಿನ ಮನೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗುರುಬಸವ ದೇವರನ್ನು ಸನ್ಮಾನಿಸಲಾಯಿತು. ಅರಿವಿನ ಮನೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವೆಂಕಟ್ರಾಯಗೌಡ ಬೆನಕನ್, ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಪಾಟೀಲ್, ಚಿಂತಕ ಬಸವರಾಜಪ್ಪ ವೆಂಕಟಾಪುರ, ವೈದ್ಯ ಬಸವರಾಜರಡ್ಡಿ, ಗಲಗಮಠದ ಬಸಯ್ಯ ಸ್ವಾಮಿ, ಡಾ.ಸುಮಂಗಲ ಪತ್ತಾರ ಇದ್ದರು.
Published on

ದೇವದುರ್ಗ: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗಳು ಎತ್ತಿನ ಬಂಡಿಯ ಗಾಲಿಗಳಂತೆ ಜೀವನ ನಡೆಸಬೇಕು ಎಂದು ಅರಿವಿನ ಮನೆಯ ಮುಖ್ಯಸ್ಥ ಶ್ರೀ ಗುರುಬಸವ ದೇವರು ಹೇಳಿದರು.

ಬಸವ ಜಯಂತಿ ನಿಮಿತ್ತ ಪಟ್ಟಣದ ಶ್ರೀ ಗುರುಬಸವ ದೇವರ ಅರಿವಿನ ಮನೆ ಅಂಗಳದಲ್ಲಿ ಆಯೋಜಿಸಿದ್ದ 35 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶುಕ್ರವಾರ ಮಾತನಾಡಿದರು. ಬಸವಣ್ಣ ಗುಡಿ ಮುಂದಿರುವುದು ಎತ್ತು ಅಲ್ಲ. ಬದುಕಿನಲ್ಲಿ ಬಿದ್ದವರನ್ನು ಮೇಲೆ ಎತ್ತಲು ಬಂದವರು. ಬಸವಾದಿ ಪ್ರಮಥರು ಜನರಿಗಾಗಿ ಬದುಕು ಸವೆಸಿದರು. ಶರಣರಂತೆ ಕಾಯಕ, ದಾಸೋಹ ತತ್ವದಲ್ಲಿ ಜೀವನ ನಡೆಸಿ ಲಿಂಗ, ಜಂಗಮ ಒಂದೇ ಎನ್ನುವ ಭಾವ ಇರಿಸಿಕೊಳ್ಳಬೇಕು. ಜಾತಿ ಅಳಿಯಲಿ, ಪ್ರೀತಿ ಉಳಿಯಲಿ ಎನ್ನುವುದು ಶರಣರ ತತ್ವವಾಗಿದೆ ಎಂದರು.

ಜೋಡೆತ್ತುಗಳಂತೆ ಜೀವನ ಎನ್ನುವ ಒಕ್ಕಲುತನ ಕೂಡಿಮಾಡಿದರೆ ಮಕ್ಕಳೆಂಬ ಸಮೃದ್ಧ ಬೆಳೆ ಬರಲು ಸಾಧ್ಯ. ಅರಿವಿನ ಮನೆಗೆ ಶರಣರೇ ಬೆನ್ನೆಲುಬು. ಶರಣರು ಬೇಡುವವರಲ್ಲ ನೀಡುವವರು. ನೀವು ನೀಡುವವರು ಆಗಬೇಕು. ಅತ್ತೆ ಮಾವ, ತಂದೆ ತಾಯಿ ದೇವರ ಸ್ವರೂಪ. ತಂದೆ ತಾಯಿಗೆ ನಮಿಸಿದರೆ ದೇವರಿಗೆ ನಮಸ್ಕಾರ ಮಾಡಿದಂತೆ. ಸಂಸ್ಕಾರ ಕುಸಿದು ಅನಾಥ, ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಜಗತ್ತಿನ ಸಮಸ್ಯೆಗೆ ಶರಣರ ತತ್ವದಲ್ಲಿ ಪರಿಹಾರವಿದೆ. ಅರಿತು ನಡೆದರೆ ಪರಿಹಾರ ಸಿಗಲಿದೆ ಎಂದರು.

ಬಸವತತ್ವ ಚಿಂತಕ ತಿಮ್ಮನಗೌಡ ಚಿಲ್ಕರಾಗಿ ನವಜೋಡಿಗಳಿಗೆ ವಚನಾಮೃತ ಬೋಧಿಸಿ ಮಾಂಗಲ್ಯಧಾರಣೆ ಮಾಡಿಸಿದರು. ಅರಿವಿನಮನೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವೆಂಕಟ್ರಾಯಗೌಡ ಬೆನಕನ್, ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಪಾಟೀಲ್, ಚಿಂತಕ ಬಸವರಾಜಪ್ಪ ವೆಂಕಟಾಪುರ, ವೈದ್ಯ ಬಸವರಾಜರಡ್ಡಿ, ಗಲಗ ಮಠದ ಬಸಯ್ಯ ಸ್ವಾಮಿ, ಜಾನಪದ ಪರಿಷತ್ ಅಧ್ಯಕ್ಷೆ ಡಾ.ಸುಮಂಗಲ ಪತ್ತಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾನಮ್ಮ, ಬಸವಂತ್ರಾಯಗೌಡ, ಹನುಮಂತ್ರಾಯ, ಅಮರೇಶ ಎಲ್‌ಐಸಿ, ಬಸವರಾಜ ಯಾಟಗಲ್, ಮುನಿಯಪ್ಪ ನಾಗೋಲಿ, ಶಾಂತಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net