

ಹಗರಿಬೊಮ್ಮನಹಳ್ಳಿ: ಸರ್ಕಾರಗಳು ಮಾಡದಿರುವ ಅನೇಕ ಸಮಾಜಮುಖಿ ಕೆಲಸಗಳನ್ನು ಮಠ-ಮಾನ್ಯಗಳು ಮಾಡುತ್ತಿವೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದ ಹಳೇ ಊರಿನ ಶ್ರೀಹಾಲಸ್ವಾಮಿ ಮಠದಲ್ಲಿ ಬುಧವಾರ ಆಯೋಜಿಸಿದ್ದ, 25ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಮಾರಕವಾಗಿರುವ ಒಸಿ, ಬೆಟ್ಟಿಂಗ್‌ನಂತ ಮಾಫಿಯಾಕ್ಕೆ ಬಲಿಯಾಗದೆ ಉತ್ತಮ ಜೀನವ ನಡೆಸಬೇಕು. ಪಾಲಕರನ್ನು ವೃದ್ಧಾಪ್ಯದಲ್ಲಿ ಸರಿಯಾಗಿ ಹಾರೈಕೆಮಾಡಬೇಕು. ಕೂಡು ಕುಟುಂಬಗಳು ಅವಿನಾಭಾವ ಸಂಬಂಧವನ್ನು, ಸಾಮಾರಸ್ಯ ಜೀವನವನ್ನು ಕಲಿಸುತ್ತವೆ ಎಂದರು.
ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಯಾರಲ್ಲಿ ಸಹಕಾರ ಮನೋಭಾವ ಇರುತ್ತೋ ಅವರು ಸಮಾಜಮುಖಿಯಾಗಲು ಸಾಧ್ಯ. ಸಾಮೂಹಿಕ ವಿವಾಹ ನಡೆಸುವುದು ಕಷ್ಟ ಆದರೆ, ಇದರಿಂದ ಪಾಲಕರಿಗೆ ಆರ್ಥಿಕ ಹೊರೆ ಉಳಿಸಿದಂತಾಗುತ್ತೆ ಎಂದರು.
ಕುಕನೂರು ಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಕಳೆದ ಕಳೆದ 30ವರ್ಷಗಳಿಂದ ಜಾತ್ರಾಮಹೋತ್ಸವ ನಡೆಯುತ್ತಿದೆ. ಇದು 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವಾಗಿದೆ. ಇದಕ್ಕೆ ನಾಡಿನೆಲ್ಲೆಡೆ ಭಕ್ತಸಮೂಹದ ಸಹಕಾರದಿಂದಲೇ ಯಶಸ್ವಿಯಾಗುತ್ತಿದೆ. ಬಡವರ ಕಲ್ಯಾಣ ಕಾರ್ಯಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಇನ್ನು ಮಠದ ಪಕ್ಕದಲ್ಲಿರುವ ನಿವೇಶನದಲ್ಲಿ ಕಲ್ಯಾಣಮಂಟಪ ನಿರ್ಮಾಣವಾಗಬೇಕು. ಇದಕ್ಕಾಗಿ ಸರ್ಕಾರದಿಂದ ಕ್ಷೇತ್ರದ ಶಾಸಕರು ಮತ್ತು ಭಕ್ತರು ಸಹಕಾರ ನೀಡಬೇಕು ಎಂದರು.
ಬೆಣ್ಣಿಹಳ್ಳಿ ಪಂಚಾಕ್ಷರಿ ಶಿವಾಚಾರ್ಯ, ಅಡವಿಹಳ್ಳಿ ಗಂಗಾಧರ ಸ್ವಾಮೀಜಿ, ಬಾಚಿಗೊಂಡನಹಳ್ಳಿ ತೋಟದಾರ್ಯ ಮಹಾಂತೇಶ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪ್ರಮುಖರಾದ ಪ್ರಕಾಶ ಚಿತ್ತವಾಡ್ಗಿ, ಡಾ.ವಿಶ್ವನಾಥ ಗವಿಯಪ್ಪ, ಸಂಚಿ ಶಿವಕುಮಾರ, ನಿವೃತ್ತ ಸೈನಿಕ ರಾಮರೆಡ್ಡಿ, ಸೋಗಿ ಮಲ್ಲಣ್ಣ, ಹೋಟಲ್ ಸಿದ್ದರಾಜ, ಖಾನಾವಳಿ ಬಸವರಾಜಪ್ಪ, ನಾಗಯ್ಯ, ಮಲ್ಲಪ್ಪ, ಸಿದ್ದೇಶ್ವರ ಸ್ವಾಮೀಜಿ, ಮಹೇಶ, ನಾಗರಾಜ ಇತರರಿದ್ದರು.