ಶಾಂತಿ ಸಹಬಾಳ್ವೆಯಿಂದ ಜೀವನ ಸಾಗಿಸಿ

Live in peaceful coexistence
ಕೆರೂರ ಸಮೀಪದ ಉಗಲವಾಟ ಗ್ರಾಮಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ ವಂಟಗೋಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
Published on

ಕೆರೂರ: ಜಾತಿ, ಪಂಥ ಮರೆತು ಒಬ್ಬರಿಗೊಬ್ಬರು ಶಾಂತಿ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ ವಂಟಗೋಡಿ ಹೇಳಿದರು.

ಉಗಲವಾಟ ಗ್ರಾಮಕ್ಕೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ, ಗ್ರಾಮದಲ್ಲಿ ದಲಿತರು, ಸವರ್ಣೀಯರ ಮಧ್ಯೆ ಈ ಹಿಂದೆ ನಡೆದ ಅಹಿತಕರ ಘಟನೆಯಿಂದ ಉಂಟಾಗಿದ್ದ ವೈಮನಸ್ಸು ದೂರ ಮಾಡುವ ನಿಟ್ಟಿನಲ್ಲಿ ಉಭಯ ಮುಖಂಡರ ಪ್ರತ್ಯೇಕ ಸಭೆ ನಡೆಸಿ ಅವರು ಮಾತನಾಡಿದರು. ಸರ್ವರೂ ಹಬ್ಬ-ಹರಿ ದಿನ, ಜಾತ್ರೆ, ಸಭೆ, ಸಮಾರಂಭಗಳಲ್ಲಿ ಪರಸ್ಪರರು ಒಟ್ಟಾಗಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳ ಸವರ್ಣೀಯರು ದೇವಸ್ಥಾನ, ತೆರೆದ ಬಾವಿಗಳಿಗೆ, ಗಿರಣಿ ಮತ್ತಿತರ ಕಡೆ ದಲಿತರು ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಬೇಕು. ಬಹಿಷ್ಕಾರ, ಜಾತಿ ನಿಂದನೆಯಂತಹ ಕೃತ್ಯಗಳನ್ನು ಎಸಗಿ ಕೌಟುಂಬಿಕ ಸಾಮರಸ್ಯ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಕಾನೂನು ಬಳಕೆ ಬೇಡ: ದುರ್ಗಾದೇವಿ ಸಮುದಾಯ ಭವನದಲ್ಲಿ ದಲಿತರ ಸಭೆ ನಡೆಸಿದ ವಂಟಗೋಡಿ ಅವರು, ಅನವಶ್ಯಕವಾಗಿ ಕಾನೂನು ಬಳಕೆ ಮಾಡಿಕೊಳ್ಳಬೇಡಿ. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು ಎಂದರು.

ಅನ್ಯಾಯ ಸರಿಪಡಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ನೊಂದವರಿಗೆ ಪರಿಹಾರ ನೀಡಬೇಕು. ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ದಲಿತರು ಆಗ್ರಹಿಸಿದರು.

ಡಂಗುರ ಸಾರಿದ್ದು ತಪ್ಪಾಗಿದೆ

ಏಕಾಏಕಿಯಾಗಿ ಡಂಗುರ ಸಾರಿದ್ದು ತಪ್ಪಾಗಿದೆ. ಇನ್ನು ಮುಂದೆ ಗ್ರಾಮದಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಒಂದಾಗಿ ಬಾಳುತ್ತೇವೆ ಎಂದು ಸವರ್ಣೀಯ ಮುಖಂಡರು ಹೇಳಿದರು.

ಎಸಿ ಸಂತೋಷ ಜಗಲಾಸರ, ಡಿಎಸ್‌ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ, ತಹಸೀಲ್ದಾರ್ ಮಧುರಾಜ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಐ.ಎಸ್ ತಳಗಡೆ, ಸಮಾಜ ಕಲ್ಯಾಣ ಅಧಿಕಾರಿ ಹಿರೇಮಠ, ರಾಮಣ್ಣ ಡೊಳ್ಳಿನ, ಪಿಡಿಒ ಸವಿತಾ ನಂದೆಪ್ಪನವರ, ಬಿ.ಎಚ್. ತಿಮ್ಮನಾಯ್ಕರ, ಬಸಣ್ಣ ಬ್ಯಾಹಟ್ಟಿ, ಕೃಷ್ಣಾ ಸಿಮಿಕೇರಿ, ರಮೇಶ ಮುದ್ದಾಪೂರ, ಯಂಕಣ್ಣ ಭಜಂತ್ರಿ, ಪಿಎಸ್‌ಐ ಭೀಮಪ್ಪ ರಬಕವಿ, ವಿಠ್ಠಲ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net