ಪರಿಸರಕ್ಕೆ ಪೂರಕವಾಗಿ ಬದುಕಿ

IMG20241124194324.jpg
Published on

ಬೆಳಗಾವಿ: ಪ್ರತಿಯೊಬ್ಬರಿಗೆ ಪರಿಸರದ ಜ್ಞಾನ ಕೊಡಬೇಕು. ಪರಿಸರವಿದ್ದರೆ ಮಾನವ ಎಂಬುದನ್ನು ಅರಿತುಕೊಂಡು ಪ್ರತಿಯೊಬ್ಬರೂ ಪರಿಸರಕ್ಕೆ ಪೂರಕವಾಗಿ ಬದುಕಬೇಕು ಎಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಮಂಜುನಾಥ ಚೌವ್ಹಾಣ್ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೂ ಮಾಹಿತಿ ಶಾಸ್ತ್ರ ವಿಭಾಗದಿಂದ ಭೌಗೋಳಿಕ ಮಾಹಿತಿ ವ್ಯವಸ್ಥೆ ದಿನಾಚರಣೆಯ ನಿಮಿತ್ತ ‘ಹವಾಮಾನ ಬದಲಾವಣೆ ಮತ್ತು ದೂರ ಸಂವೇದನಾಶೀಲತೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹವಾಮಾನ ಬದಲಾವಣೆಯು ಕೈಗಾರಿಕೆಯಿಂದ ಹೊರಬರುವ ತ್ಯಾಜ್ಯವಸ್ತುಗಳು, ಹೊರಸೂಸುವ ವಿಷಪೂರಿತ ಗಾಳಿ, ವಾಹನದಿಂದ ಹೊರಸೂಸುವ ವಿಷಯುಕ್ತ ಅನಿಲ ಇನ್ನೂ ಅನೇಕ ಮೂಲಗಳಿಂದ ಪರಿಸರ ಹಾಳಾಗುತ್ತಿದ್ದು, ಜೀವಿಗಳ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಗಂಡಾಂತರ ಎದುರಾಗಿದೆ. ಇಂಥ ಸಂದರ್ಭದಲ್ಲಿ ಜಗತ್ತು ಹವಾಮಾನ ವೈಪರಿತ್ಯದ ಕಡೆಗೆ ತುರ್ತಾಗಿ ಗಮನ ಹರಿಸಬೇಕು. ಅದಕ್ಕೆ ಬೇಕಾದ ಅತ್ಯುತ್ತಮ ಯೋಜನೆ ರೂಪಿಸಬೇಕು. ತನ್ನ ಬದುಕಿನ ಜತೆಗೆ ಇತರ ಜೀವಿಗಳ ಬದುಕು ಇದೆ ಎಂಬುದನ್ನು ಮಾನವ ಅರಿತು ಬದುಕಬೇಕು ಎಂದರು.

ಪ್ರಾಚಾರ್ಯ ಪ್ರೊ. ಎಂ.ಜಿ. ಹೆಗಡೆ ಮಾತನಾಡಿ, ಹವಾಮಾನ ಬದಲಾವಣೆ ಜಾಗತಿಕ ಸಮಸ್ಯೆಯಾಗಿದೆ. ಒಂದು ದೇಶದ ಹವಾಮಾನ ವೈಪರೀತ್ಯವು ಇನ್ನೊಂದು ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆಯ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಗಮನ ಹರಿಸಬೇಕು. ಉತ್ತಮ ಪರಿಸರ ಉತ್ತಮ ಜೀವಸಂಕುಲ ಎಂಬುದನ್ನು ನಾವೆಲ್ಲರೂ ಅರಿತು ಪಾಲಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಭಾರತ ಸರ್ಕಾರದ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾ. ರತ್ನ ವಿ. ಅವರು ಹವಮಾನ ಬದಲಾವಣೆ ಮತ್ತು ಅರಣ್ಯ ರಕ್ಷಣೆ ಕುರಿತು ಮಾತನಾಡಿ, ಹವಮಾನ ರಕ್ಷಣೆಯಲ್ಲಿ ಅರಣ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ದಿವೇಚಾ ಸೆಂಟರ್ ಫಾರ್ ಕ್ಲೆಮೇಟ್ ಚೇಂಜ್‌ನ ವಿಜ್ಞಾನಿ ಡಾ. ಅನಿಲ ಕುಲಕರ್ಣಿ ಮಾತನಾಡಿದರು.

ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಪ್ರಾಜೆಕ್ಟ್‌ಗಳನ್ನು ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡಿ, ಸ್ವಯಂ ಚಾಲಿತ ಬೀದಿ ದೀಪ ಸಿದ್ಧಪಡಿಸಿದ ರಾಮೇಶ್ವರ ಮತ್ತು ತಂಡಕ್ಕೆ ಮೊದಲ ಸ್ಥಾನ ಹಾಗೂ ಜಿಐಎಸ್ ನಲ್ಲಿ ವೃತ್ತಿ ಜೀವನದ ಅಂಶಗಳು ಕುರಿತು ಸಿದ್ಧಪಡಿಸಿದ ಕರಣ್ ಪವರ್ ಮತ್ತು ತಂಡಕ್ಕೆ ದ್ವಿತೀಯ ಸ್ಥಾನವನ್ನು ನೀಡಿದರು.

ವಿದ್ಯಾರ್ಥಿನಿಯರಾದ ಮೇಘಾ ಹೆಚ್. ನಿರೂಪಿಸಿದರು, ಸುಮಾ ಟಿ. ಸ್ವಾಗತಿಸಿದರು, ಮೇಘಾ ಬಿ. ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿ, ಗದಗ ಬಾಗಲಕೋಟೆಯ ವಿವಿಧ ತಾಂತ್ರಿಕ ಮತ್ತು ಪ್ರಥಮ ದರ್ಜೆ ಮಾಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net