

ವಿಜಯವಾಣಿ ಸುದ್ದಿಜಾಲ ಧಾರವಾಡ
ಹದಿನಾರನೇ ಶತಮಾನದಲ್ಲೇ ಸಮಾನತೆಯ ಮಂತ್ರ ಸಾರಿದವರು ಕನಕದಾಸರು. ಧರ್ಮ ಜಾತಿಗಳಗಳ ಮಧ್ಯೆ ಸ್ಪರ್ಧೆ ಏರ್ಪಡದೆ ಸಾಮರಸ್ಯದಿಂದ ಪ್ರತಿಯೊಬ್ಬರು ಬಾಳಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
ಕನಕ ಜಯಂತಿ ನಿಮಿತ್ತ ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಕನಕ ಅಧ್ಯಯನ ಪೀಠದ ವತಿಯಿಂದ ಏರ್ಪಡಿಸಿದ್ದ ಕನಕದಾಸರ ತಾತ್ವಿಕತೆ: ಆಧುನಿಕ ಸಮಾಜದ ಪರಿಕಲ್ಪನೆ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಕನಕದಾಸರ ಕೀರ್ತನೆಗಳನ್ನು ಓದಿ ತಿಳಿದುಕೊಳ್ಳಬೇಕು. ಬಸವ, ಬುದ್ಧ, ಅಂಬೇಡ್ಕರರ ವಿಚಾರಗಳನ್ನು ತಮ್ಮ ಸಾಹಿತ್ಯದಲ್ಲಿ ಮನು ಕುಲದ ಉದ್ಧಾರಕ್ಕೆ ಕನಕದಾಸರು ತಿಳಿಸಿದ್ದಾರೆ ಎಂದರು.
ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ಕನಕದಾಸರನ್ನು ದೈವತ್ವಕ್ಕೆ ಹೋಲಿಸಿ ಜನರಿಂದ ದೂರ ಇಡಲು ಪ್ರಯತ್ನಿಸಲಾಗುತ್ತಿದೆ. ಸಣ್ಣ ಕೀರ್ತನೆಗಳ ಮೂಲಕ ಇಡೀ ಭಾರತದ ಸಂಪ್ರದಾಯವನ್ನು ಕನಕದಾಸರು ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಕನಕದಾಸರು ಬಹಳ ಹಿಂದೆಯೇ ಟೀಕಿಸಿದ್ದಾರೆ ಎಂದರು.
ಪ್ರಭಾರ ಕುಲಪತಿ ಪ್ರೊ. ಬಿ.ಎಂ. ಪಾಟೀಲ ಮಾತನಾಡಿದರು. ಪ್ರೊ. ಸಿ. ಕೃಷ್ಣಮೂರ್ತಿ, ಮಾಜಿ ಕುಲಪತಿ ಪ್ರೊ. ಕೆ.ಬಿ.ಗುಡಸಿ, ರವಿ ಮಾಳಿಗೇರ, ಡಿ.ಡಿ ಮಾಳಗಿ, ಇತರರು ಇದ್ದರು. ನಿಜಲಿಂಗಪ್ಪ ಮಟ್ಟಿಹಾಳ ಸ್ವಾಗತಿಸಿದರು. ಡಾ.ಹನಮಗೌಡ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅನಿತಾ ಹಾಲಮತ ನಿರೂಪಿಸಿದರು. ಪ್ರೊ. ಮೃತ್ಯುಂಜಯ ಅಗಡಿ ವಂದಿಸಿದರು.