

ಹೊನ್ನಾವರ: ವಿದ್ಯಾರ್ಥಿ ಜೀವನಕ್ಕೆ ಯೋಧರ ಬದುಕಿನಷ್ಟೇ ಮಹತ್ವವಿದೆ. ಅದನ್ನು ಸರಿಯಾಗಿ ಬಳಸಿಕೊಂಡು ದೇಶ ಕಾಯುವ ಸೈನಿಕರಂತೆ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ನಿವೃತ್ತ ಯೋಧ ಜೋನ್ ಮೆಂಡಿಸ್ ಹೇಳಿದರು.
ಪಟ್ಟಣದ ನಂ. 2 ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕ ಪಿ.ಆರ್. ನಾಯ್ಕ ಮಾತನಾಡಿ, ಸಂವಿಧಾನದಲ್ಲಿ ಲಿಖಿತಗೊಂಡ 18 ಭಾಷೆಗಳಲ್ಲಿಯೂ ಕನ್ನಡ ಭಾಷೆ 8 ಜ್ಞಾನಪೀಠ ಪ್ರಶಸ್ತಿ ಪಡೆದು ವಿಶಾಲ ಸಮೃದ್ಧ ಭಾಷೆಯಾಗಿ ಬೆಳೆದು ನಿಂತಿದೆ. ತಾಯಿ ನೆಲದ ಭಾಷೆ ಬದುಕಿನ ಅವಿಭಾಜ್ಯ ಅಂಗದಂತೆ. ಬದುಕಿನ ಉಸಿರಾಗಿರುವ ಕನ್ನಡ ಬೆಳೆಯಲು, ಬೆಳಗಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಸಾಹಿತಿ ಡಾ ಎಸ್. ಡಿ. ಹೆಗಡೆ ಮಾತನಾಡಿ, ಪ್ರಜ್ಞಾವಂತ ಪ್ರಜೆಗಳೇ ನಾಡಿನ ಸಂಪತ್ತು. ಯಾವ ನಾಡು ತನ್ನ ಪ್ರಜೆಗಳ ನಾಡಿಮಿಡಿತವನ್ನು ಹೆಚ್ಚಿಸುತ್ತದೆಯೋ ಆಗ ನಾಡು ಅಭಿವೃದ್ಧಿ ಹೊಂದುತ್ತದೆ. ನಮ್ಮ ಮಕ್ಕಳು ಜಗತ್ತಿನ ಬೆಳಕು. ಬೆಳಕಿನ ಹಬ್ಬದಲ್ಲಿ ಬೆಳಕಿಗೆ ದಾರಿ ತೋರಿಸುವಲ್ಲಿ ಶಿಕ್ಷಕರು ನಿರಂತರ ಶ್ರಮ ವಹಿಸಬೇಕು ಎಂದರು.
ನಿವೃತ್ತ ಕೆಪಿಸಿ ಅಧೀಕ್ಷಕ ಇಂಜಿನಿಯರ್ ಪದ್ಮನಾಭ ಭಟ್ಟ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡವೂ ಎಲ್ಲಾ ಭಾಷೆಗಳನ್ನು ಮೀರಿ ಬೆಳೆದಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷೆ ನೇತ್ರಾವತಿ ತಾಂಡೆಲ್ ಅಧ್ಯಕ್ಷತೆ ವಹಿಸಿದ್ದರು. ಜೊಯ್ ಡಿಸೋಜಾ, ಮಂಜುನಾಥ ಮೇಸ್ತ, ಅಶ್ವಿನಿ ನಾಯ್ಕ, ರೇಖಾ ಶೇಟ್, ಗೀತಾ ಮೇಸ್ತ, ರೇಣುಕಾ ಗೊನ್ಸಲ್ವಿಸ್, ರೇಣುಕಾ ಮೇಸ್ತ, ಎಲಿಜಾ ಡಿಸೋಜಾ, ಇತರರು ಉಪಸ್ಥಿತರಿದ್ದರು. ತೇಜಸ್ವಿನಿ ಮೇಸ್ತ ಭರತನಾಟ್ಯ ಪ್ರದರ್ಶಿಸಿದರು. ಮುಖ್ಯಾಧ್ಯಾಪಕಿ ಲುವೆಜಿನ್ ಪಿಂಟೊ, ಶಿಕ್ಷಕಿ ಪ್ಲಾವಿಯಾ ಮೆಂಡೋಸ್ ಹಾಗೂ ವರ್ಷಾ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.