

ನರಗುಂದ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಚನಗಳ ಸಾರ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಪ್ರಸ್ತುತ ಹಾಗೂ ಬಹಳಷ್ಟು ಉಪಯುಕ್ತವಾಗಿವೆ. ಸಮಾಜದ ಎಲ್ಲ ಜನಾಂಗದವರು ಬಸವಣ್ಣನವರ ವಚನಗಳ ಬಗ್ಗೆ ಅರಿತುಕೊಂಡು ಕಾಯಕ ತತ್ವದಡಿ ಸುಖಿಮಯಿ ಜೀವನ ನಡೆಸಬೇಕು ಎಂದು ಬಸವ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಕಂಠಿ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ ಹಾಗೂ ಶ್ರೀ ಮುರುಘ ರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗಜ್ಯೋತಿ ಬಸವಣ್ಣನವರ ವಚನಗಳು ಸಾಮಾಜಿಕ ಕ್ರಾಂತಿಗಳಾಗಿ ಹೊರ ಹೊಮ್ಮಿವೆ. ಬಸವಣ್ಣನವರು ಲಿಂಗ ಮತ್ತು ಸಾಮಾಜಿಕ ತಾರತಮ್ಯ, ಮೂಢ ನಂಬಿಕೆಗಳ ಡಾಂಬಿಕ ಆಚರಣೆಗಳನ್ನು ತಿರಸ್ಕರಿಸಿದ್ದರು. ಪ್ರಪ್ರಥಮ ಬಾರಿಗೆ ಆಧ್ಯಾತ್ಮಿಕ ಅನುಭವದ ಸಭಾಂಗಣವನ್ನು ಬಸವಣ್ಣನವರು ಸ್ಥಾಪಿಸಿದರು ಎಂದರು.
ಪ್ರೊ. ಆರ್.ಎಚ್. ತಿಗಡಿ ಮಾತನಾಡಿ, ಬಸವ ಶೈವ ಕುಟುಂಬದಲ್ಲಿ ಬಸವಣ್ಣನವರು ಬೆಳೆದರು. ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರೂ ಬೇಕಾದರೂ ಶಿವಶರಣರಾಗಬಹುದು. ಪೊಳ್ಳು ದೇವರುಗಳನ್ನು ಸುತ್ತುತ್ತಿದ್ದ ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ರೂಪಿಸಿಕೊಳ್ಳಲು ಸಹಕಾರಿಯಾದರು ಎಂದರು.
ಶ್ರೀಮುರುಘ ರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ಧರ್ಮದರ್ಶೀ ಸಿ.ಎಚ್. ಕೋರಿ, ಸಂಗಪ್ಪ ಪೂಜಾರ, ಶಿಕ್ಷಕಿ ಕಲಾವತಿ ಹಾದಿಮನಿ ಮಾತನಾಡಿದರು. ಎಸ್.ವೈ. ಹುಂಬಿ, ವಿ.ಎನ್. ಕೊಳ್ಳಿಯವರ, ಬಿ.ಎಚ್. ಕ್ಯಾರಕೊಪ್ಪ, ಎಚ್.ಎ. ಮುದಿಯಪ್ಪನವರ, ಪತ್ರೆಪ್ಪ ಹಡಪದ, ಎಸ್.ವಿ. ಭಜಂತ್ರಿ, ಕೆ.ಎನ್. ಹದಗಲ್, ಟಿ.ಆರ್. ಉಳ್ಳಾಗಡ್ಡಿ, ಆರ್.ಬಿ. ಚಿನಿವಾಲರ, ರವಿ ಬ್ಯಾಹಟ್ಟಿ, ಕಸ್ತೂರಿ ಸೂಳಿಬಾವಿ, ರೇಣುಕಾ ಹಡಪದ, ಶೋಭಾ ಕುಪ್ಪಸ್ತ, ಇತರರು ಉಪಸ್ಥಿತರಿದ್ದರು. ಕೆ.ಬಿ. ಹಾದಿಮನಿ ಕಾರ್ಯಕ್ರಮ ನಿರ್ವಹಿಸಿದರು.