

ಹಿರೇಕೆರೂರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುತ್ತಿರುವ ಸಂಘಗಳು, ಗ್ರಾಮೀಣ ಭಾಗಗಳಲ್ಲಿ ಆರ್ಥಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಿವೆ. ಅಲ್ಲದೆ, ಮಹಿಳೆಯರು ಸ್ವಾವಲಂಬಿ ಹಾಗೂ ನೆಮ್ಮದಿಯುತ ಜೀವನ ನಡೆಸುವಂತೆ ಮಾಡಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ತರಳಬಾಳು ಸಾಂಸ್ಕೃತಿಕ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸಂಘಗಳನ್ನು ಕಟ್ಟಿಕೊಂಡು, ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವ ಮೂಲಕ ಆರ್ಥಿಕ ಸಬಲತೆ ಹೊಂದುತ್ತಿದ್ದಾರೆ ಎಂದರು.
ಪಪಂ ಅಧ್ಯಕ್ಷೆ ಸುಧಾ ಚಿಂದಿ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಂದ ಪಡೆದ ಸಾಲವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾವೇರಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಶಾಖಾಧಿಕಾರಿ ವಿನಾಯಕ, ರಾಣೆಬೆನ್ನೂರಿನ ಐಡಿಬಿಐ ಬ್ಯಾಂಕ್ ಶಾಖಾ ಪ್ರಬಂಧಕ ಪ್ರಸನ್ನಕುಮಾರ, ಸಾಹಿತಿ ಡಾ. ನಿಂಗಪ್ಪ ಚಳಗೇರಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಂಭುಲಿಂಗ ಗೂಳಪ್ಪನವರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಕವಿತಾ ಹಾರ್ನಳ್ಳಿ, ಸುಭಾಸ ಹದಡೇರ, ಮಂಜಪ್ಪ ಕಣಕೊಟಗಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಮೇಲ್ವಿಚಾರಕರು, ಸದಸ್ಯರು ಇದ್ದರು.
ತಾಲೂಕು ಯೋಜನಾಧಿಕಾರಿ ಮಂಜುನಾಥ ಎಂ., ಧರ್ಮಪ್ಪ ಜೋಗೇರ, ಶಶಿಕಲಾ ಈಶ್ವರ, ಕಿರಣ ಹಾಗೂ ಮಂಜುಶ್ರೀ ಕಾರ್ಯಕ್ರಮ ನಿರ್ವಹಿಸಿದರು.