

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಿಂದ ಕೃಷಿ ಯೋಜನೆಗಳ ಉಡುಗೊರೆಗಳ ಉದ್ಘಾಟನಾ ಮತ್ತು ಶಂಕುಸ್ಥಾಪನೆ ನೆರವೇರಿಸುವ ನೇರಪ್ರಸಾರದ ವೀಕ್ಷಣೆ ಆಯೋಜಿಸಲಾಗಿತ್ತು.
ನೇರ ಪ್ರಸಾರದಲ್ಲಿ ಕೇಂದ್ರ ಸಚಿವ ಸಂಪುಟವು ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಅನ್ನು ಅನುಮೋದಿಸಿದ ದೃಶ್ಯ ಪ್ರಸಾರವಾಯಿತು. ಇದು ದೇಶೀಯ ಉತ್ಪಾದನೆ ಹೆಚ್ಚಿಸುವ ಮತ್ತು ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿರುವ ಐತಿಹಾಸಿಕ ಉಪಕ್ರಮವಾಗಿದೆ ಎಂಬುದನ್ನು ವಿವರಿಸಲಾಯಿತು.
ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಘೋಷಣೆ:
ಭಾರತದ ಆಹಾರ ವ್ಯವಸ್ಥೆ ಮತ್ತು ಆಹಾರ ಪದ್ಧತಿಯಲ್ಲಿ ದ್ವಿದಳ ಧಾನ್ಯಗಳು ಮಹತ್ವ ಹೊಂದಿವೆ. ಭಾರತವು ವಿಶ್ವದ ಅತಿದೊಡ್ಡ ದ್ವಿದಳ ಧಾನ್ಯಗಳ ಉತ್ಪಾದನೆ ಮತ್ತು ಬಳಸುವ ರಾಷ್ಟ್ರವಾಗಿದೆ. ಹೆಚ್ಚುತ್ತಿರುವ ಆದಾಯ ಮತ್ತು ಜೀವನಮಟ್ಟ ಸುಧಾರಣೆಯೊಂದಿಗೆ, ದ್ವಿದಳ ಧಾನ್ಯಗಳ ಬಳಕೆ ಹೆಚ್ಚಾಗಿದೆ. ಆದರೂ ದೇಶೀಯ ಉತ್ಪಾದನೆಯು ಬೇಡಿಕೆಗೆ ಅನುಗುಣವಾಗಿಲ್ಲ, ಹಾಗಾಗಿ ಆಮದುಗಳಲ್ಲಿ ಮಾಡುವ ಪ್ರಮಾಣ ಶೇ.20ಕ್ಕೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ಆಮದು ಅವಲಂಬನೆ ಕಡಿಮೆ ಮಾಡಲು, ಹೆಚ್ಚುತ್ತಿರುವ ಬೇಡಿಕೆ ಪೂರೈಸಲು, ಉತ್ಪಾದನೆ ಗರಿಷ್ಠಗೊಳಿಸಲು ಮತ್ತು ರೈತರ ಆದಾಯ ಹೆಚ್ಚಿಸಲು, 2025-26 ರ ಬಜೆಟ್‌ನಲ್ಲಿ ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಘೋಷಿಸಲಾಯಿತು.
ರೈತರಿಂದ ವೀಕ್ಷಣೆ:
200ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ನೇರ ಪ್ರಸಾರ ವೀಕ್ಷಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೇಂದ್ರದ ವಿಜ್ಞಾನಿಗಳು ಭಾಗವಹಿಸಿದ್ದರು.