ಕರೀಘಟ್ಟ ಮಡಿಲಲ್ಲಿ ಲೀಥಿಯಂ ನಿಕ್ಷೇಪ: 30 ವರ್ಷದಿಂದ ಸಂಶೋಧನೆ, 5 ವರ್ಷದ ಹಿಂದೆ ಯುರೇನಿಯಂ ಪತ್ತೆ

Hasan
Published on

ಮಂಡ್ಯ/ಶ್ರೀರಂಗಪಟ್ಟಣ: ಕಾರು ಮತ್ತು ಬೈಕ್​ಗಳ ಬ್ಯಾಟರಿಗೆ ಅವಶಕ್ಯವಾಗಿರುವ ಅಪರೂಪದ ಖನಿಜ ನಿಕ್ಷೇಪ ಲೀಥಿಯಂ ಸಂಪತ್ತು ದೇಶದಲ್ಲಿಯೇ ಪ್ರಥಮವಾಗಿ ಮಂಡ್ಯ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ.

ತಾಲೂಕಿನ ಅಲ್ಲಾಪಟ್ಟಣ ಮತ್ತು ಮರಳಗಾಲ ಗ್ರಾಮಗಳ ವ್ಯಾಪ್ತಿಯ ಕರೀಘಟ್ಟದ ಬೆಟ್ಟದ ಹಿಂಭಾಗದ ತಪ್ಪಲಿನ ಪತ್ತೆಯಾಗಿರುವ ಈ ನಿಕ್ಷೇಪ ಸುಮಾರು 150 ಎಕರೆ ಪ್ರದೇಶದಲ್ಲಿದೆ ಎನ್ನಲಾಗುತ್ತಿದೆ. ನಿಕ್ಷೇಪದ ಶೋಧವನ್ನು ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸ್ತುತ್ತಿರುವ ಅಟಾಮಿಕ್ ಮಿನರಲ್ಸ್ ಡೈರೆಕ್ಟರ್ಸ್ ವಿಜ್ಞಾನಿಗಳ ತಂಡ ನಡೆಸುತ್ತಿದ್ದು, ಸಂಶೋಧನೆ ನಡೆಸುತ್ತಿರುವ 150 ಎಕರೆ ಸುತ್ತ ತಂತಿಬೇಲಿ ನಿರ್ವಿುಸಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

30 ವರ್ಷದಿಂದ ಶೋಧ: ಸುಮಾರು 30 ವರ್ಷಗಳಿಂದ ಈ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಆರಂಭದಲ್ಲಿ ಕಾಗೆ ಬಂಗಾರ ಸಿಕ್ಕಿತ್ತು. ನಂತರ ಯುರೇನಿಯಂ ಖನಿಜ ಪತ್ತೆಯಾಗಿದ್ದು, ಈ ಬಗ್ಗೆ ‘ವಿಜಯವಾಣಿ’ ಪತ್ರಿಕೆ 5 ವರ್ಷಗಳ ಹಿಂದೆಯೇ ವರದಿ ಮಾಡಿತ್ತು. ನಂತರ ಯಾವುದೇ ಮಾಹಿತಿಯನ್ನ ಶೋಧ ನಡೆಸುತ್ತಿರುವ ವಿಜ್ಞಾನಿಗಳು ಬಹಿರಂಗಪಡಿಸಿರಲಿಲ್ಲ. ಈಗ ಲೀಥಿಯಂ ಇರುವ ಮಾಹಿತಿಯನ್ನು ಕೇಂದ್ರ ವಿಜ್ಞಾನ ಕೇಂದ್ರದ ಗೌರವ ಪ್ರಾಧ್ಯಾಪಕ ಎನ್.ಮುನಿಚಂದ್ರಯ್ಯ ಅವರು ‘ಕರೆಂಟ್ ಸೈನ್ಸ್’ ನಿಯತಕಾಲಿಕೆ ಲೇಖನದಲ್ಲಿ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ 0.5 ಸ್ಕೆ್ವೕರ್ ಮೀಟರ್​ನಲ್ಲಿ 30,300 ಟನ್ ನಿಕ್ಷೇಪವಿದ್ದು, ಅದನ್ನು ಶುದ್ಧೀಕರಿಸಿದ ನಂತರ 14,100 ಟನ್ ಸಿಗಲಿದೆ.

2017ನೇ ಸಾಲಿನಲ್ಲಿ 384 ಮಿಲಿಯನ್ ಲೀಥಿಯಂ ಬ್ಯಾಟರಿಗಳನ್ನು ಇತರ ದೇಶಗಳಿಂದ ಭಾರತ ಆಮದು ಮಾಡಿಕೊಂಡಿದ್ದು, 2019ರಲ್ಲಿ ಈ ಪ್ರಮಾಣ 1.2 ಬಿಲಿಯನ್​ಗೆ ಏರಿಕೆಯಾಗಿತ್ತು. ಸಂಶೋಧನೆ ನಡೆಯುತ್ತಿರುವ ಸ್ಥಳದಲ್ಲಿ ಈಗಾಗಲೇ ಹಲವು ಖನಿಜಗಳು ದೊರೆತಿದ್ದು, ಇದೀಗ ಪತ್ತೆಯಾಗಿರುವ ಲೀಥಿಯಂ ನಿಕ್ಷೇಪ ದೇಶದ ವಾಣಿಜ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎನ್ನುತ್ತಾರೆ ಪಿಇಎಸ್ ಕಾಲೇಜಿನ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರಸನ್ನಕುಮಾರ್. ಪ್ರಸ್ತುತ ಚಿಲಿ ದೇಶದಲ್ಲಿ 8.6 ಮಿಲಿಯನ್ ಟನ್, ಆಸ್ಟ್ರೇಲಿಯದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೈನಾದಲ್ಲಿ 1.7 ಮಿಲಿಯನ್ ಟನ್, ಪೋರ್ಚುಗಲ್​ನಲ್ಲಿ ವಾರ್ಷಿಕವಾಗಿ 60 ಸಾವಿರ ಟನ್ ಲೀಥಿಯಂ ಸಿಗುತ್ತಿದೆ ಎಂದವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net