ಮಹಿಳೆಯರು ರಚಿಸಿದ ಸಾಹಿತ್ಯಕ್ಕೆ ಮನ್ನಣೆ ಕಡಿಮೆ

mysore
Published on

ಮೈಸೂರು: ಮಹಿಳೆಯರು ರಚಿಸಿದ ಸಾಹಿತ್ಯಕ್ಕೆ ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಕಡಿಮೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್.ಕರಿಕಲ್ ಕಳವಳ ವ್ಯಕ್ತಪಡಿಸಿದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉದಯಗಿರಿ ಕನ್ನಡ ಸಂಘ, ಕದಂಬ ಕಲಾಪೀಠದ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುಜಯ ಸುರೇಶ್ ಅವರ ‘ಸಂಪ್ರದಾಯ ಸಂಸ್ಕೃತಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬಹುತೇಕ ಕಾಲಘಟ್ಟದಲ್ಲಿ ಮಹಿಳಾ ಸಾಹಿತ್ಯ ನಿರ್ಲಕ್ಷೃಕ್ಕೆ ಒಳಪಟ್ಟಿದೆ. ಇದಕ್ಕೆ ಚರಿತ್ರೆ ಪುಟದಲ್ಲಿ ಬಹಳಷ್ಟು ನಿದರ್ಶನಗಳು ದೊರೆಯುತ್ತವೆ. ಈ ನಡುವೆ, ಸಕಾರಾತ್ಮಕ ಬೆಳವಣಿಗಳು ದಾಖಲಾಗಿವೆ. ಜೈನ ಪುರಾಣದಲ್ಲಿ ಮೊದಲೇ ತೀರ್ಥಂಕರರು ಇಬ್ಬರು ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ್ದರು. ವೇದ ಕಾಲದಲ್ಲಿ ಕೆಲ ಮಹಿಳೆಯರು ಮಂತ್ರ ರಚನೆಯಲ್ಲಿ ತೊಡಗಿದ್ದರು ಎಂದು ತಿಳಿಸಿದರು.


ಕನ್ನಡ ಸಾಹಿತ್ಯ ಕಾಲಘಟ್ಟದಲ್ಲಿ ಜಾನಪದ ತ್ರಿಪದಿಗಳು ಮಹಿಳೆಯರು ತಮ್ಮ ಭಾವ ಅಭಿವ್ಯಕ್ತಿಯ ಮಾಧ್ಯಮವಾಗಿ ರೂಪಗೊಂಡಿತು. ಮಹಿಳೆಯರು ತಮ್ಮ ಆಗು-ಹೋಗುಗಳು, ನೋವು-ನಲಿವು, ದುಃಖ-ದುಮ್ಮಾನ ಹೀಗೆ ವಿವಿಧ ಭಾವವನ್ನು ತ್ರಿಪದಿಯ ಮೂಲಕ ವ್ಯಕ್ತಪಡಿಸಿದ್ದಾರೆ. ಇಂತಹ ಅಸಂಖ್ಯಾತ ತ್ರಿಪದಿಗಳು ದೊರೆಯುತ್ತವೆ ಎಂದರು.


ವಚನಗಾರ್ತಿಯರೂ ತಮ್ಮ ಅನುಭವಗಳ ಬುತ್ತಿಯನ್ನು ವಚನಗಳ ಮೂಲಕ ಅಭಿವ್ಯಕ್ತಿಸಿದರು. ಆಲೋಚನೆ, ಚಿಂತನೆಯಷ್ಟೇ ಅಲ್ಲದೆ ಒಡನಾಡಿಗಳು, ತಮ್ಮ ಪತಿಯರ ತಪ್ಪುಗಳನ್ನೂ ಅಕ್ಷರದ ಮೂಲಕ ಪ್ರಶ್ನಿಸಿ ದಿಟ್ಟತನ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.


ಮನುಷ್ಯ ಸದಾ ಎಚ್ಚರಿಕೆ, ಅರಿವು, ಶ್ರದ್ಧಾ ಮನಸ್ಥಿತಿಯಲ್ಲಿ ಇರಬೇಕು. ವಚನಗಾರರು ಮೌಢ್ಯ, ಕಂದಾಚಾರವನ್ನು ತಿರಸ್ಕರಿಸಿದರು. ಆದರೆ, ಜನರ ನಂಬಿಕೆಯನ್ನು ನಿರಾಕರಣೆ ಮಾಡಲಿಲ್ಲ. ನಂಬಿಕೆ, ಶ್ರದ್ಧೆ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ತಿಳಿಸಿದರು.


ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು, ಚಾಮರಾಜನಗರ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ಕೆ.ಪೋತ್‌ರಾಜ್, ಆರ್ಯ ಈಡಿಗರ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಜಯಣ್ಣ, ಲೇಖಕಿ ಸುಜಯ್ ಸುರೇಶ್, ಕದಂಬ ಕಲಾಪೀಠದ ಅಧ್ಯಕ್ಷ ಬಿ.ವಿದ್ಯಾಸಾಗರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net