ಕವಿ ಕತ್ತಲ ಜಗತ್ತಿನ ಜಾಗೃತಿ ಬೆಳಕು

dj clk sahithya
Published on

ಚಳ್ಳಕೆರೆ: ಒಬ್ಬ ಕವಿ, ಪತ್ರಕರ್ತ ಕತ್ತಲ ಜಗತ್ತಿನಲ್ಲಿ ಜಾಗೃತಿಯ ಬೆಳಕಿನ ಸ್ಪರ್ಶಕ್ಕೆ ಧ್ಯಾನಿಸುತ್ತಾನೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.
ನಗರದ ನೌಕರರ ಭವನದಲ್ಲಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಚಿನ್ಮೂಲಾದ್ರಿ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕವಿ ಕೊರ‌್ಲಕುಂಟೆ ತಿಪ್ಪೇಸ್ವಾಮಿ ಅವರ ಬರಹದ ಒಳನೋಟ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಿಂದ ಆರಂಭವಾಗುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದಾಖಲೆಯಾಗಿ ಉಳಿದುಕೊಳ್ಳುತ್ತವೆ ಎಂದರು.

ಪ್ರಸ್ತುತ ಮೊಬೈಲ್, ಅಂತರ್ಜಾಲ ಬಳಕೆಯಿಂದ ಮನುಕುಲದ ದಿಕ್ಕುಗಳು ಭಿನ್ನವಾಗುತ್ತಿವೆ. ಇಂತಹ ವಾಸ್ತವತೆಯ ನಡುವೆ ತನ್ನ ಬದುಕಿನ ಅನುಭವಗಳನ್ನು ದಾಖಲಿಸುವ ಆಸಕ್ತಿಯಲ್ಲಿ ಕವಿಗಳು ಸಮಾಜಕ್ಕೆ ಮತ್ತು ತಳಸಮುದಾಯದ ಚಿಂತನೆಗೆ ಹೊಸ ಸ್ಪರ್ಶ ನೀಡುತ್ತಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಧ್ವನಿ ಇಲ್ಲದವರ ಅಸಮಾನತೆ ನೋವುಗಳನ್ನು ತಣ್ಣನೆಯ ಬರಹದಲ್ಲಿ ಸಂಕಲನ ಎಚ್ಚರಿಸುತ್ತದೆ. ಮನುಷ್ಯನಿಗೆ ಮಲಗಲು ಜಾಗವಿಲ್ಲ. ಇನ್ನು ಸತ್ತಾಗ ಹೂಳಲು ಸ್ಮಶಾನವಿಲ್ಲ ಎನ್ನುವುದನ್ನು ಮಾರ್ಮಿಕವಾಗಿ ಬರವಣಿಗೆಯಲ್ಲಿ ಪ್ರತಿಭಟಿಸಲಾಗಿದೆ ಎಂದರು.

ಅಕ್ಷರ ಕಲಿಸುವ ವಿದ್ಯಾಮಂದಿರದಲ್ಲಿ ಅನುಚಿತವಾಗಿ ನಡೆದುಕೊಳ್ಳುವ ಮತ್ತು ಸಮಾಜಕ್ಕೆ ಮಗ್ಗಲು ಮುಳ್ಳಾಗುತ್ತಿರುವ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯಂದು ಶಿಕ್ಷಿಸಬೇಕು ಎಂದು ಸಾಕ್ಷರತಾ ಸಮಾಜಕ್ಕೆ ತೀಕ್ಷ್ಣವಾಗಿ ಬರಹದ ಮೂಲಕ ಹೇಳಿರುವುದು ಬಹಳ ವಿಶೇಷ ಎಂದು ತಿಳಿಸಿದರು.

ಕವಿ ಜಡೇಕುಂಟೆ ಮಂಜುನಾಥ್ ಮಾತನಾಡಿ, ಬದುಕಿನ ನೋವು ಅನುಭವಿಸಿದ ಮನದಲ್ಲಿ ಹುಟ್ಟಿಕೊಳ್ಳುವ ಸಾಹಿತ್ಯ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ ಎಂದರು.

ಪುಸ್ತಕವನ್ನು ಶಾಸಕ ಟಿ.ರಘುಮೂರ್ತಿ ಬಿಡುಗಡೆ ಮಾಡಿದರು.

ನಗರಸಭೆ ಅಧ್ಯಕ್ಷೆ ಜೈತುನ್‌ಬಿ, ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ಆರ್.ಮಂಜುಳಮ್ಮ, ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್, ರೈತ ಮುಖಂಡ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಕೆ.ಚಿಕ್ಕಣ್ಣ, ಗ್ರಾಪಂ ಅಧ್ಯಕ್ಷ ಬಿ.ಆನಂದ್‌ಕುಮಾರ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಎಸ್.ಎಚ್.ಶಫೀವುಲ್ಲಾ, ಕಸಾಪ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಇದ್ದರು.

ಕವಿಯತ್ರಿ ಬಿ.ಶಬ್ರೀನಾ ನಿರೂಪಿಸಿದರು. ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ ಪ್ರಾರ್ಥಿಸಿದರು. ಎಸ್.ಬಿ.ತಿಪ್ಪೇಸ್ವಾಮಿ ಸ್ವಾಗತಿಸಿದರು. ಯಾದಲಗಟ್ಟೆ ಜಗನ್ನಾಥ ವಂದಿಸಿದರು.

ಬಯಲುಸೀಮೆಯಲ್ಲಿ ಜನಜೀವನ ಹೋರಾಟದ ಬದುಕಾಗಿದೆ. ಒಬ್ಬ ಕವಿ, ಪತ್ರಕರ್ತನಿಗೆ ಒಳದೃಷ್ಟಿಕೋನ, ತಾಳ್ಮೆ ಮತ್ತು ಇತರೆ ವರ್ಗಗಳ ಜತೆ ಬೆರೆಯುವ ಸೌಜನ್ಯ ಗುಣ ಸಮಾಜದಲ್ಲಿ ಹುಟ್ಟುಹಾಕುವ ಕೆಲಸವನ್ನು ಸಾಹಿತ್ಯ ಮಾಡಬೇಕಿದೆ.ಟಿ.ರಘುಮೂರ್ತಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net