

ವಿಜಯಪುರ: ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಆ.28ರಿಂದ 30ರ ವರೆಗೆ ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟ ಏರ್ಪಡಿಸಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರಾಗೃಹ ಇಲಾಖೆ ಹಾಗೂ ನಗರದ ಕೇಂದ್ರ ಕಾರಾಗೃಹ ಆಶ್ರಯದಲ್ಲಿ ಆಯೋಜಿಸಿರುವ ಸಾಹಿತ್ಯ ಕಮ್ಮಟವನ್ನು ಆ. 28ರಂದು ಬೆಳಗ್ಗೆ 10.30ಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಉದ್ಘಾಟಿಸುವರು. ಬಬಲೇಶ್ವರ ತಾಲೂಕಿನ ಸಂಗಾಪುರದ ತಪೋನಿಷ್ಠ ಗುರು ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹಾಗೂ ಅಂಜುಮನ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ಶಾರದಾಮಣಿ ಹುನಶಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಮಹಾದೇವ ಬಸರಕೋಡ ಪ್ರಾಸ್ತಾವಿಕವಾಗಿ ಮಾತನಾಡುವರು. ಜೈಲಿನ ಅಧೀಕ್ಷಕ ಬಿ.ಎಂ.ಕೊಟ್ರೇಶ ಅಧ್ಯಕ್ಷತೆ ವಹಿಸುವರು. ನಂತರ ’ಅಪರಾಧ ಮತ್ತು ಸಾಹಿತ್ಯ ಸಂಸ್ಕಾರ’ ಕುರಿತು ಗಣೇಶ ಅಮೀನಗಡ ಉಪನ್ಯಾಸ ನೀಡುವರು.
ಆ. 29ರಂದು ಬೆಳಗ್ಗೆ 10.30ಕ್ಕೆ ‘ಅಪರಾಧ; ವಚನ ಸಾಹಿತ್ಯದ ಮಹತ್ವ’ ಕುರಿತು ವಿಜಯಪುರ ನಗರದ ಡಿವೈಎಸ್ಪಿ ಬಸವರಾಜ ಯಲಿಗಾರ, ‘ತತ್ವಪದಗಳಲ್ಲಿ ಜೀವನ ದರ್ಶನ’ ಕುರಿತು ಲೇಖಕಿ ಚಂದ್ರಪ್ರಭಾ ಬಾಗಲಕೋಟ ಹಾಗೂ ‘ಜಾನಪದದಲ್ಲಿ ಕನ್ನಡ ಕಥಾಲೋಕ’ ಕುರಿತು ಲೇಖಕ ಶಂಕರ ಬೈಚಬಾಳ ಉಪನ್ಯಾಸ ನೀಡುವರು.
ಆ. 30ರಂದು ಬೆಳಗ್ಗೆ10.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಭಾಗವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸುವರೆಂದು ಪ್ರಕಟಣೆ ತಿಳಿಸಿದೆ.