ಸಾಮಾಜಿಕ ಹೊಣೆಗಾರಿಕೆ ಇಲ್ಲದ ಸಾಹಿತಿ ಆತ್ಮದ್ರೋಹಿ

mysore dasara
Published on

ಮೈಸೂರು: ಪ್ರತಿಯೊಬ್ಬ ಬರಹಗಾರ, ಸಾಹಿತಿ, ಕವಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಬರೆದಂತೆ ಬದುಕಬೇಕು, ಬದುಕಿದಂತೆ ಬರೆಯಬೇಕು. ಹಾಗೆಯೆ, ಆತ್ಮವಿಮರ್ಶೆಯನ್ನೂ ಮಾಡಿಕೊಳ್ಳಬೇಕು. ಇಲ್ಲವಾದರೆ ಬರವಣಿಗೆ ಪೊಳ್ಳು, ಸುಳ್ಳು ಆಗಲಿದೆ ಎಂದು ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಮತ ವ್ಯಕ್ತಪಡಿಸಿದರು.


ಪ್ರಾದೇಶಿಕ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ರೋಮ್‌ಗೆ ಬೆಂಕಿ ಬಿದ್ದಾಗ ಚಕ್ರವರ್ತಿ ನೀರೋ ಪಿಟೀಲು ನುಡಿಸುತ್ತಾ ಕುಳಿತಿದ್ದನಂತೆ. ಹೀಗೆ ಕವಿಗಳೂ ಬದುಕಿದರೆ ನೈತಿಕ ಶಕ್ತಿ, ಧೈರ್ಯ ಇರಲ್ಲ. ಪ್ರಜ್ಞಾವಂತ ಪ್ರಜೆಯಂತೆ ಕಾರ್ಯನಿರ್ವಹಿಸಲೂ ಆಗಲ್ಲ. ಆದ್ದರಿಂದ ಸಾಹಿತಿಗಳಿಗೆ ಜವಾಬ್ದಾರಿ ಹೆಚ್ಚು. ಅವಕಾಶವಾದಿಯಾದರೆ ಸಾಹಿತಿಗೂ, ರಾಜಕಾರಣಿಗೂ ವ್ಯತ್ಯಾಸವಿರುವುದಿಲ್ಲ. ಕರ್ತವ್ಯ, ಕೃತಿಪ್ರಜ್ಞೆಯಿಂದ ನಿರ್ವಹಿಸಬೇಕು. ಇಲ್ಲವಾದರೆ ಕವಿ, ಸಾಹಿತಿ ಎನಿಸಿಕೊಳ್ಳಲು ಯೋಗ್ಯರಾಗಲ್ಲ. ಅವಕಾಶವಾದಿ, ಸಾಂಸ್ಕೃತಿಕ ದಾಸರಾಗುವ ಮೂಲಕ ಹೊಣೆಗೇಡಿ ಆಗಬೇಕಾಗುತ್ತದೆ ಎಂದರು.

ಕಾವ್ಯ ಯಾವತ್ತೂ ಯುದ್ಧ ವಿರೋಧ ನೆಲೆಯೇ...!


ಕಾವ್ಯ, ಸಾಹಿತ್ಯ, ಕವಿತೆಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಅದು ಭಾಷೆಗೆ ಸಿಮೀತವಲ್ಲ. ವಿಶ್ವವ್ಯಾಪಿ, ಮನುಷ್ಯ ಕೇಂದ್ರೀತವಲ್ಲ. ಅದು ಸಕಲ ಜೀವ ಕೇಂದ್ರದ ಲೋಕದೃಷ್ಟಿ. ಅನಕ್ಷರಸ್ಥರು ಸೃಷ್ಟಿಸಿರುವ ಜಾನಪದದಲ್ಲಿ ಆ ಪ್ರಜ್ಞೆ ಇದೆ. ಕಾವ್ಯ ಯಾವತ್ತೂ ಯುದ್ಧ ವಿರೋಧ ನೆಲೆಯೇ. ಅದು ಶಾಂತಿ, ಪ್ರೀತಿ, ಪ್ರೇಮ, ಸೌಹಾರ್ದತೆ ಕುರಿತು ಮಾತನಾಡಬೇಕು ಎಂದು ಹೇಳಿದರು.


ಇತಿಹಾಸ, ಪುರಾಣವನ್ನು ತಿರುಚಲಾಗುತ್ತಿದೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸದಿದ್ದರೆ ತಪ್ಪಾಗಲಿದೆ. ಮುಂದಿನ ಪೀಳಿಗೆಗೆ ಕೆಟ್ಟ ಭವಿಷ್ಯವನ್ನು ಬಿಟ್ಟುಹೋಗಬೇಕಾಗುತ್ತದೆ. ಆದ್ದರಿಂದ ಮೌನ ಸಲ್ಲದು. ಬದುಕು-ಬರಹ ಬೇರೆ ಬೇರೆಯಾಗಿ ಎಡಬಿಡಂಗಿ ಆಗುವುದು ಬೇಡ. ಕಾವ್ಯದ ಮೂಲಕ ಸತ್ಯದ ಸಾಕ್ಷಾತ್ಕಾರ ಆಗಲಿ ಎಂದರು.

ಯುದ್ಧದ ಭೀತಿ, ಅಮಾನವೀಯತೆ ವಿಜೃಂಭಿಸುತ್ತಿದೆ.


ಈಗ ಸಂತೋಷಪಡುವ ಸ್ಥಿತಿಯಲ್ಲಿಲ್ಲ. ಭಾರತವನ್ನು ಒಳಗೊಂಡಂತೆ ಜಗತ್ತಿನ ಮೂಲೆ ಮೂಲೆಯಲ್ಲೂ ಯುದ್ಧದ ಭೀತಿ, ಅಮಾನವೀಯತೆ ವಿಜೃಂಭಿಸುತ್ತಿದೆ. ಜಗತ್ತಿನ ಯಾವ ಪ್ರದೇಶವೂ ಸುರಕ್ಷಿತವಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಚೀನಾ, ಜಪಾನ್‌ನಲ್ಲಿ ಶುರುವಾದ ಜನಾಂಗೀಯ ಶ್ರೇಷ್ಠತೆಯ ವ್ಯಸನ ಎಲ್ಲೆಡೆ ವ್ಯಾಪಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಜಗತ್ತಿನ ಸಕಲ ಜೀವಪರ, ಪ್ರಕೃತಿ ಪರ ಕಾಳಜಿವುಳ್ಳವರು ಮಾತ್ರ ನಿಜವಾದ ಜಗದ್ಗುರುಗಳು ಎಂದು ವಿಶ್ಲೇಷಿಸಿದರು.


ಯಾವುದೇ ರಾಜಕಾರಣ ಕಲೆ, ಸಂಸ್ಕೃತಿಯನ್ನು ಕಡೆಗಣಿಸಬಾರದು. ಕಲೆ ಮತ್ತು ಸಂಸ್ಕೃತಿಯನ್ನು ಆರೋಗ್ಯಕರವಾಗಿ ಉಳಿಸಿದಷ್ಟು ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸುತ್ತದೆ. ಇಂತಹ ವಾತಾವರಣ ಸೃಷ್ಟಿಯಾಗಲಿ ಎಂದು ಆಶಿಸಿದರು.
ಕವಯಿತ್ರಿ ಚ.ಸರ್ವಮಂಗಳ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಡಾ.ಎಚ್.ಟಿ.ಪೋತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net