

ಬೆಳಗಾವಿ: ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಅನುಭವಿಸುವ ಸಂಗತಿಗಳಿಗೆ ಅಕ್ಷರ, ಚಿತ್ರದ ಮೂಲಕ ಜೀವ ತುಂಬಿಸುವ ಕೆಲಸ ಮಾಡಬೇಕು ಎಂದು ಕೆಎಲ್‌ಇ ಲಿಂಗರಾಜ ಪಿಯು ಕಾಲೇಜ್ ಪ್ರಾಚಾರ್ಯೆ ಗಿರಿಜಾ ಹಿರೇಮಠ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಪಿಯು ಕಾಲೇಜಿನಲ್ಲಿ ಶನಿವಾರ ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ವೇದವ್ಯೆಹ ಸಾಹಿತ್ಯ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ವಿದ್ಯಾರ್ಥಿಗಳಲ್ಲಿ ವಿಶಿಷ್ಠ ಶಕ್ತಿ, ಸಾಮರ್ಥ್ಯ ಇರುತ್ತದೆ. ನಿತ್ಯ ಬದುಕಿನಲ್ಲಿ ಕಾಣುವ ಸಂಗತಿಗಳನ್ನು ಸಾಹಿತ್ಯದ ಮೂಲಕ ಹೊರಹೊಮ್ಮಿಸುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು. ಕಲಾ ಮಾಧ್ಯಮ ವಿಸ್ತಾರವಾದುದು. ನಮ್ಮ ಅನುಭವಗಳನ್ನು ಕಾವ್ಯ, ಕತೆ, ನಾಟಕ, ಚಿತ್ರಕಲೆಗಳ ಮೂಲಕ ಹೊರಹೊಮ್ಮಿಸಿದಾಗ ಸುಪ್ತ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದರು. ಉತ್ಸವದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಸ್ವರಚಿತ ಕವನ, ಚಿತ್ರಮಾತು, ಪ್ರಬಂಧ, ಕತೆ, ಚರ್ಚಾಕೂಟ, ಭಾಷಣದಂತಹ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಪ್ರಶಾಂತ ಖೋತ ಬಹುಮಾನ ವಿತರಣೆ ಮಾಡಿದರು. ಶ್ರದ್ಧಾ ಪಾಟೀಲ, ಲಕ್ಷ್ಮೀ ಬಿರಾದಾರ, ರವೀಂದ್ರ ಬಡಿಗೇರ ಇತರರಿದ್ದರು.