ಸಾಹಿತ್ಯ ಭಾವನೆಗಳ ಹಬ್ಬವಾಗಬೇಕು; ದಿನೇಶ್ ಬೆಳ್ಯಪ್ಪ

MDK06
Published on

ಮಡಿಕೇರಿ: ಸಾಹಿತ್ಯ ಸಂಗೀತ ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಮನದಾಳದ ಭಾವನೆಗಳ ಹಬ್ಬವಾಗಬೇಕು ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅಭಿಪ್ರಾಯಿಸಿದರು.


ಅಮರಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿರವರ ಜನ್ಮದಿನದ ನೆನಪಿನಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಶನಿವಾರ ಆಯೋಜಿಸಿದ ವರ್ಚುವಲ್ ಲೈವ್ ಹಾಡುಗಾರಿಕೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.


ಯಾವುದೇ ಸ್ಪರ್ಧೆಯಾದರೂ ಅದು ನಮ್ಮೊಳಗಿನ ಹುಮ್ಮಸ್ಸನ್ನು ಇಮ್ಮಡಿಗೊಳಿಸಬೇಕು. ಕೇವಲ ಪ್ರಶಸ್ತಿ ಪಡೆಯಲಷ್ಟೇ ಸೀಮಿತವಾಗಬಾರದು. ಸಂಗೀತ, ಸಾಹಿತ್ಯದಂತಹ ಸ್ಪರ್ಧೆಗಳು ನಮ್ಮನ್ನು ಉಲ್ಲಾಸಭರಿತರನ್ನಾಗಿ ಆ ಕ್ಷಣವನ್ನು ಆಸ್ವಾದಿಸಿ ಅನುಭವಿಸುವಂತಿರಬೇಕು. ಪ್ರತಿಯೊಬ್ಬ ಸ್ಪರ್ಧಿಯೂ ಎದುರಾಳಿಯ ಗಾಯನವನ್ನು ಆಶ್ವಾದಿಸಬೇಕು. ಹಾಗಾದಾಗ ಮಾತ್ರ ಸ್ಪರ್ಧೆಯು ಸಂಭ್ರಮವಾಗುತ್ತದೆ ಎಂದರು.


ಸ್ಪರ್ಧೆಯಲ್ಲಿ ೩೩ ಸ್ಪರ್ಧಿಗಳು ಹಿರಿಯ ಸಾಹಿತಿಗಳಾದ ಅಪ್ಪನೆರವಂಡ ಅಪ್ಪಚ್ಚ, ಐ.ಮಾ.ಮುತ್ತಣ್ಣ, ತೋನಾಚಂ, ಮುಲ್ಲೆರ ಜಿಮ್ಮಿ ಅಯ್ಯಪ್ಪ, ಚಕ್ಕೆರ ತ್ಯಾಗರಾಜ ಅಪ್ಪಯ್ಯ, ಆಪಾಡಂಡ ಜಗ ಮೊಣ್ಣಪ್ಪ, ಉಳ್ಳಿಯಡ ಡಾಟಿಪೂವಯ್ಯ, ಬಾಚರಣಿಯಂಡ ಅಪ್ಪಣ್ಣ ಅವರುಗಳ ಸಾಹಿತ್ಯವನ್ನು ಹಾಡಿ ಸಂಭ್ರಮಿಸಿದರು. ಸ್ಪರ್ಧೆಯ ವಿಜೇತರಾಗಿ ಪ್ರಥಮ ಸ್ಥಾನವನ್ನು ಚೆಟ್ಟಿರ ಗ್ರಂಥಕಾರ್ಯಪ್ಪ, ದ್ವಿತೀಯ ಇಟ್ಟಿರ ನಿಖಿಲ್ ನಾಚಪ್ಪ, ತೃತೀಯ ಮಾದೆಯಂಡ ಪ್ರೀತಿ ಪೊನ್ನಮ್ಮ ಅವರುಗಳು ಪಡೆದುಕೊಂಡರು.


ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳು ಸಂಗೀತಕಾರರು ಗಾಯಕರಾದ ಕಂಬೆಯಂಡ ದೇವಯ್ಯ, ಪಳಂಗಂಡ ರೀಟಾ ನಾಚಪ್ಪ, ಅಮ್ಮಂಡ ಹರೀಶ್ ಅವರು ಜವಾಬ್ದಾರಿ ನಿಭಾಯಿಸಿದರು. ಕಾರ್ಯಕ್ರಮದ ಮೊದಲಿಗೆ ಕೊಡವ ಪದ್ಧತಿಯಂತೆ ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯ ಚೆನಿಯಪಂಡ ಮನು ಮಂದಣ್ಣರವರು ನೆಲ್ಲಕ್ಕಿಯಲ್ಲಿ, ಅಕ್ಕಿ ಹಾಕಿ ನೇರ್ಚೆ ಕಟ್ಟುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net