

ಮಡಿಕೇರಿ: ಸಂಸ್ಕೃತಿ, ಪರಂಪರೆ, ಪದ್ಧತಿ ಮತ್ತು ಆಚಾರ ವಿಚಾರಗಳು ಉಳಿಯಬೇಕಾದರೆ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಅಗತ್ಯವಾಗಿದೆ ಎಂದು ಸಾಹಿತಿ ಪಿ.ಎಸ್.ವೈಲೇಶ್ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಕೊಡವ ಮಕ್ಕಡ ಕೂಟದ ೯೧ನೇ ಪುಸ್ತಕ, ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಅವರ ೩ನೇ ಪುಸ್ತಕ ತಾಳ್ಮೆರ ತಾವರೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ ಇಂದಿಗೂ ಶ್ರೀಮಂತವಾಗಿರಲು ಸಾಹಿತ್ಯವೇ ಕಾರಣ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗಿನ ಗೌರಮ್ಮ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರ ಹೆಸರು, ಖ್ಯಾತಿ ಉಳಿದುಕೊಂಡಿರುವುದು ಸಾಹಿತ್ಯದಿಂದ ಎಂದರು.
ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳೇ ಇಲ್ಲ ಎಂಬ ಕಾಲಘಟ್ಟವಿತ್ತು. ಆದರೆ, ಇಂದು ಜಿಲ್ಲೆಯಲ್ಲ್ಲಿ ಸಾಹಿತ್ಯದ ಸುವರ್ಣಕಾಲ ಆರಂಭವಾಗಿದೆ. ಆದರೆ ನೈಜ ಸಾಧಕರು ಮೂಲೆ ಗುಂಪಾಗುತ್ತಿದ್ದು, ಎಲ್ಲರನ್ನೂ ಗುರುತಿಸುವ ಕೆಲಸ ಆಗಬೇಕು. ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾರ್ಥ ಸಾಧನೆ ಸೇರಿಕೊಂಡಿರುವುದು ಬೇಸರ ಸಂಗತಿ, ನಿಜವಾದ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಎಂದು ತಿಳಿಸಿದರು.
ಸಾಹಿತ್ಯ ಎಲ್ಲಾ ಪದ್ಧತಿ, ಪ್ರಕಾರಗಳನ್ನು ಉಳಿಸುತ್ತದೆ. ಕನ್ನಡ ಭಾಷೆಯ ಸಹೋದರಿ ಭಾಷೆ ಕೊಡವ ಭಾಷೆಯಲ್ಲಿ ಸಾಹಿತ್ಯದ ಬೆಳವಣಿಗೆ ಇಲ್ಲದ ಕಾಲದಲ್ಲಿ ಸಂಘ, ಸಂಸ್ಥೆಗಳು, ಪತ್ರಿಕೆಗಳು ಕೊಡವ ಸಾಹಿತ್ಯವನ್ನು ಮೇರು ಮಟ್ಟದಲ್ಲಿ ತಂದಿರಿಸಿವೆ. ಇಂತಹ ಸಾಹಿತ್ಯ ಸೇವೆಗೆ ಒತ್ತಾಸೆ ನೀಡಿದವರಲ್ಲಿ ಕೊಡವ ಮಕ್ಕಡ ಕೂಟವು ಒಂದು. ಪುಸ್ತಕವನ್ನು ಮುದ್ರಿಸಿ ಪ್ರಕಟಿಸುವುದು ಸವಾಲಿನ ಕೆಲಸ, ಅದನ್ನು ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾಡುತ್ತಿದ್ದು, ೧೦೦ನೇ ಪುಸ್ತಕಕ್ಕೆ ನೂರು ಲೇಖಕಕರ ಬರಹವನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸುವುದು ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಎಂದು ವೈಲೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚಮಂಡ ಗೌರಮ್ಮ ಮಾದಮ್ಮಯ್ಯ, ತಾಳ್ಮೆರ ತಾವರೆ ಪುಸ್ತಕದ ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ವಿಶೇಷ ಚೇತನಳಾಗಿ, ಮನೆಯಲ್ಲೇ ಅಕ್ಷರಾಭ್ಯಾಸ ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ತಾಳ್ಮೆರ ತಾವರೆ ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಮಾತನಾಡಿ, ತಾಳ್ಮೆರ ತಾವರೆ ಪುಸ್ತಕವು ಕಾವೇರಿ ಮಾತೆ, ಗಿಡ, ಪ್ರಕೃತಿ, ಪ್ರಾಣಿ, ಪಕ್ಷಿ, ಆಸೆ, ಭಾಷೆ, ಸುಖ, ದು:ಖ, ನೋವು, ನಲಿವು, ತಂದೆ, ತಾಯಿಗೆ ಸಂಬಂಧಿಸಿದಂತೆ ೨೦೧ ಕವನಗಳನ್ನು ಹೊಂದಿದೆ. ಹಿರಿಯ ಕವಿ, ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ಮೌಲ್ಯಯುತ ಬರಹಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಮೂಲೆ ಗುಂಪಾಗಿಸದೆ ಪ್ರತಿಯೊಬ್ಬರು ಓದಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಸಾಹಿತಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದ ಅವರು, ಮತ್ತಷ್ಟು ಪುಸ್ತಕಗಳನ್ನು ಹೊರತರುವ ಹಂಬಲವಿದೆ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಲಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಕೊಡವ ಮಕ್ಕಡ ಕೂಟ ಈಗಾಗಲೇ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೯೧ ಕೃತಿಗಳನ್ನು ಬಿಡುಗಡೆ ಮಾಡಿದೆ. ೧೦೦ ಬರಹಗಾರರ ಲೇಖನವನ್ನೊಳಗೊಂಡ ನೂರನೇ ಪುಸ್ತಕವನ್ನು ಹೊರ ತರಲು ಕೂಟ ಸಿದ್ಧತೆ ನಡೆಸಿದ್ದು, ಬರಹಗಾರರು ಬರಹ ಕಳುಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೂಪದಿರ ಗೊಂಬೆ ಉತ್ತಪ್ಪ ಹಾಗೂ ಕೂಪದಿರ ಜುನಾ ವಿಜಯ್ ಉಪಸ್ಥಿತರಿದ್ದರು.