

ಮಡಿಕೇರಿ: ಕತೆ, ಕವನ ಕಾದಂಬರಿ, ವಿಭಿನ್ನ ಸಾಹಿತ್ಯ ಪ್ರಕಾರಗಳು ಬದುಕನ್ನು ಶ್ರೀಮಂತ ಗೊಳಿಸುತ್ತಿದ್ದವು.ಆದರೆ, ಇಂದು ಸಾಹಿತ್ಯವು ಜನಮಾನಸದಿಂದ ದೂರವಾಗುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಡಗು ಜಿಲ್ಲಾ ಅಧ್ಯಕ್ಷ ಸಿ.ಎಸ್.ಸುರೇಶ್ ಹೇಳಿದರು.
ಅಖಿಲ ಭಾರತ ಸಾಹಿತ್ಯ ಪರಿಷದ್ ವತಿಯಿಂದ ನಗರದ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರಕೃತಿ ಪರಿಸರ ಕುರಿತ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹದವಾಗಿ ಮಳೆ ಬಂದು ಭೂಮಿಯಲ್ಲಿ ನೀರು ಇಂಗಿ ಜಲ ನೆಲ ಪರಿಸರ ಸಂಪತ್ ಭರಿತವಾಗುವುದು ಸಾಮಾನ್ಯವಾಗಿತ್ತು. ಇದೀಗ ಮಳೆ ದೂರವಾಗಿದೆ. ಅದೇ ರೀತಿ ಕತೆ, ಕವನ ಕಾದಂಬರಿ, ವಿಭಿನ್ನ ಸಾಹಿತ್ಯ ಪ್ರಕಾರಗಳು ಬದುಕನ್ನು ಶ್ರೀಮಂತ ಗೊಳಿಸುತ್ತಿದ್ದವು. ಆದರೆ, ಇಂದು ಸಾಹಿತ್ಯವು ಜನಮಾನಸದಿಂದ ದೂರವಾಗುತ್ತಿದೆ. ಕುವೆಂಪು, ಬೇಂದ್ರೆ, ಪುತಿನ ಸೇರಿದಂತೆ ಹಲವು ಕನ್ನಡ ಕವಿಗಳು ಕನ್ನಡದ ಕಂಪನ್ನು ಹೊರ ಸೂಸಿದರು ಎಂದ ಅವರು, ಕಾವ್ಯ ಬದುಕಿನ ಜೀವಾಳವಾಗಿದೆ. ಗಟ್ಟಿಯಾದ ಸಮೃದ್ಧವಾದ ಕಾವ್ಯರಚನೆಯಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಬೇಕು ಎಂದರು.
ಕವನಗಳ ತೀರ್ಪುಗಾರರಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಪ್ರಕೃತಿ ಪರಿಸರ ಸಂಬಂಧಿತ ಕವಿಗೋಷ್ಠಿಯಲ್ಲಿ ಉತ್ತಮ ಕವನಗಳು ರಚನೆಯಾಗಿವೆ. ಕಾವ್ಯರಚನೆಯಲ್ಲಿ ಸಾಹಿತ್ಯದೊಂದಿಗೆ ಲಯ, ಮಾಧುರ್ಯ ಅಗತ್ಯ. ಕವನ ಸರಳವಾಗಿರಬೇಕು. ಅರ್ಥಗರ್ಭಿತವಾಗಿರಬೇಕು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರಧಾನ ಕಾರ್ಯದರ್ಶಿ ಬಬ್ಬಿರ ಸರಸ್ವತಿ ಮಾತನಾಡಿ, ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಪರಿಷತ್ತು ರೂಪಿಸುವ ಕಾರ್ಯಕ್ರಮಗಳ ಮೂಲಕ ಬಾಂಧವ್ಯ ಗಟ್ಟಿಯಾಗಬೇಕು ಎಂದರು.
ಸಮಿತಿ ಸದಸ್ಯರಾದ ಸುಶೀಲ ಕುಶಾಲಪ್ಪ, ತಮ್ಮಯ್ಯ, ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅತ್ಯುತ್ತಮ ಕವನಗಳಿಗೆ ಬಹುಮಾನ: ರಾಧಿಕಾ ವಿಶ್ವನಾಥ್ ಹಸಿರೂರ ಸಿಂಗಾರಿ ಕವನವಾಚನದ ಮೂಲಕ ಪ್ರಥಮ ಬಹುಮಾನಗಳಿಸಿದರು. ಸುಕೃತವು ನಮ್ಮದು ಕವನ ವಾಚಿಸುವುದರ ಮೂಲಕ ಪಿ.ಎಸ್.ವೈಲೇಶ್ ದ್ವಿತೀಯ ಸ್ಥಾನ ಪಡೆದರು. ಪರಿಸರದ ರಕ್ಷಣೆ ಕವನದ ಮೂಲಕ ಸುಶೀಲ ಕುಶಾಲಪ್ಪ ತೃತೀಯ ಸ್ಥಾನ ಪಡೆದರು. ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕವಿ-ಕವಯತ್ರಿಯರಿಗೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯಪರಿಷತ್ತಿನ ಜಿಲ್ಲಾ ಸಹಕಾರ್ಯದರ್ಶಿ ಚಂದನ್ ನಂದರಬೆಟ್ಟು, ಮಕ್ಕಳ ಪ್ರಕಾರ ಪ್ರಮುಖ ಹೇಮಂತ್ ಪಾರೇರ, ಜಿಲ್ಲಾ ಸಮಿತಿ ಸದಸ್ಯರಾದ ಜಾನಕಿ ಮಾಚಯ್ಯ, ಕಡ್ಲೇರ ಆಶಾ ಧರ್ಮಪಾಲ್, ಪ್ರೀತಿ ಡಿಸೋಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕವನ ವಾಚಿಸಿದ ೨೫ ಕವಿಗಳು
ಪ್ರಕೃತಿ ಪರಿಸರ ಕುರಿತ ಕವಿಗೋಷ್ಠಿಯಲ್ಲಿ ೨೫ ಕವಿಗಳು ಕವನ ವಾಚಿಸಿದರು. ಹಸಿರೂರ ಸಿಂಗಾರಿ, ಪರಿಸರ ಹನನ-ಮನನ, ಪರಿಸರ ಹಾಗೂ ಸನಾತನ ಧರ್ಮ, ಕಾಡಿದ್ದರೆ ನಾಡು, ಪರಿಸರ ಕಾಪಾಡಿ, ಪ್ರಕೃತಿಯ ಉಸಿರು, ಸಸ್ಯ ಶಾಮಲೆ, ಮಳೆ ಒಂದು ಸಂಭ್ರಮ, ಸುಕೃತವು ನಮ್ಮದು ಹೀಗೆ ಪರಿಸರಕ್ಕೆ ಸಂಬಂಧಪಟ್ಟ ಕವನಗಳು ವೀಕ್ಷಕರ ಮನ ಸೆಳೆದವು.
ಹಸಿರೂರ ಸಿಂಗಾರಿ ಹೊಂಬಣ್ಣ ತಳೆದಾಗ ನಮ್ಮೂರ ನವಿಲುಗಳು ಆಡುತ್ತಾವೋ ನಲಿದಾಡುತಾವೋ ಎಂದು ಮಡಿಕೇರಿಯ ರಾಧಿಕಾ ವಿಶ್ವನಾಥ್ ಕವನ ವಾಚಿಸಿದರೆ, ಗೊಟ್ಟೆಯ ಹಣ್ಣಿನ ಮರವು ಬಿಟ್ಟಿದೆ ಗೊಂಚಲು ಗೊಂಚಲು ಹಣ್ಣುಗಳ ತಿನ್ನಲು ಬಂದವು ವಿವಿಧ ಹಕ್ಕಿಗಳು ಮಧುರ ಸ್ವರದಲ್ಲಿ ಹಾಡುತ್ತಾ ಎಂದು ಭಾಗಿರಥಿ ಹುಲಿತಾಳ ಕವನ ವಾಚಿಸಿದರು.
ಚಿಕ್ಕ ಅಳುವಾರಿನ ರಾಜೇಶ್, ಕಗ್ಗೋಡ್ಲುವಿನ ಅಪರ್ಣ ಹುಲಿತಾಳ, ಪೇರಿಯಂಡ ಯಶೋಧ, ಕೋಂಪುಳಿರ ಇಂದಿರಾವತಿ, ಮುಕ್ಕಾಟಿ ಹರಿಣಿ ಗಿರೀಶ್, ಉಳುವಂಗಡ ಕಾವೇರಿ, ಪ್ರಗತಿಕೇಡನ ಕೆ.ಎನ್.ಕವಿತ, ರಜಿತ ಕಾರ್ಯಪ್ಪ, ಗೀತಾಂಜಲಿ, ವಿಮಲಾ ದಶರಥ, ಮಧುರ ಪಾರೆರ, ರಂಜಿತ ಪಾಲೊದರ, ಶಿವದೇವಿ, ಅವನಿಶಚಂದ್ರ, ಡಾ.ಎ.ಎನ್.ಗಾಯತ್ರಿ, ವೈಲೇಶ್, ಸುಶೀಲ ಕುಶಾಲಪ್ಪ ಸೇರಿದಂತೆ ೨೫ ಕವಿಗಳು ಕವನ ವಾಚಸಿದರು. ಕವನವಾಚನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.