ಗ್ರಾಮೀಣ ಭಾಗದಲ್ಲಿ ಸಾಹಿತ್ಯಕ್ಕೆ ಹೆಚ್ಚು ಮಹತ್ವ: .ಎ.ಪಿ.ಶ್ರೀನಾಥ್ ಹೇಳಿಕೆ

Kdb_Literature
Published on

ಕಡಬ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಕುಂತೂರು ಪದವಿನಲ್ಲಿ ನಡೆಯಲಿರುವ ಕಡಬ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆ ಕುಂತೂರು ಪದವು ಸೇಂಟ್ ಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಎ.ಪಿ.ಶ್ರೀನಾಥ್ ಮಾತನಾಡಿ, ನೂತನ ಕಡಬ ತಾಲೂಕಿನಲ್ಲಿ ಈಗಾಗಲೇ 3 ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು, 4ನೇ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ತೊಡಗಿದ್ದೇವೆ. ಪೇಟೆ ಪಟ್ಟಣಗಳಿಗಿಂತ ಗ್ರಾಮೀಣ ಭಾಗದ ಜನರು ಸಾಹಿತ್ಯ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದುದರಿಂದ ಕುಂತೂರು ಪದವಿನ ಸೇಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರವೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಡಬ ತಾಲೂಕ ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಮಾತನಾಡಿದರು. ಪುತ್ತೂರು ತಾಲೂಕು ಘಟಕದ ಮಾಜಿ ಅಧ್ಯಕ್ಷ ಐತಪ್ಪ ನಾಯ್ಕ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಸೇಂಟ್ ಜಾರ್ಜ್ ಪ್ರೌಢಶಾಲೆ ಆಡಳಿತ ಮಂಡಳಿ ಸಂಚಾಲಕ ವಿ.ಐ.ಅಬ್ರಹಾಂ, ಮಾಜಿ ಸಂಚಾಲಕ ರೋಯಿ ಅಬ್ರಹಾಂ ಹಾಗೂ ಕಾರ್ಯದರ್ಶಿ ವಿ.ವಿ.ವರ್ಗೀಸ್, ಹಿರಿಯ ಸಾಹಿತಿ ಟಿ.ನಾರಾಯಣ ಭಟ್ ರಾಮಕುಂಜ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಕ.ಸಾ.ಪ.ಕಡಬ ತಾಲೂಕು ಘಟಕದ ಪದಾಧಿಕಾರಿಗಳಾದ ಯಶವಂತ ರೈ, ಎ.ಎನ್.ಕೊಲಂಬೆ, ವೆಂಕಟ್ರಮಣ ಭಟ್ ನೆಲ್ಯಾಡಿ, ಕಿಶೋರ್ ಕುಮಾರ್ ಬಿ., ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕಿನ ಹೋಬಳಿ ಘಟಕದ ಅಧ್ಯಕ್ಷ ಪದ್ಮಪ್ಪ ಗೌಡ, ಪ್ರೇಮಾ ರಾಮಕುಂಜ, ರಮೇಶ್ ಕೋಟೆ, ಪ್ರಭಾಕರ ರೈ, ಮಾಯಿಲಪ್ಪ ಜಿ., ಮಹೇಂದ್ರ ಬಿ.ಹಡಗಲಿ ಉಪಸ್ಥಿತರಿದ್ದರು.

ಸೇಂಟ್ ಜಾರ್ಜ್ ಅನುದಾನಿತ ಪ್ರೌಢಶಾಲೆ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ.ಸ್ವಾಗತಿಸಿ, ಕ.ಸಾ.ಪ. ಕಡಬ ತಾಲೂಕು ಘಟಕದ ಪದಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net