ಸೈದ್ಧಾಂತಿಕ ಚೌಕಟ್ಟಿಗೆ ಸಿಲುಕಿದ ಸಾಹಿತ್ಯ: ನರಹಳ್ಳಿ ಬಾಲಸುಬ್ರಹ್ಮಣ್ಯ ಆತಂಕ

narahalli
Published on

ಬೆಂಗಳೂರು:ಸಾಹಿತ್ಯದಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ. ಆದರೆ, ಪ್ರಸ್ತುತ ದಿನಗಳಲ್ಲಿ ಸಾಹಿತ್ಯವು ಸೈದ್ಧಾಂತಿಕ ಚೌಕಟ್ಟಿಗೆ ಸಿಲುಕಿದೆ ಎಂದು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕವಿ ಬಿ.ಆರ್​.ಲಕ್ಷ್ಮಣ್​​ರಾವ್​​ ಜನ್ಮ ದಿನ ನಿಮಿತ್ತ ಸಿವಿಜಿ ಪಬ್ಲಿಕೇಷನ್ಸ್​,ಹರಿವು ಬುಕ್ಸ್​ ಸಹಯೋಗದಲ್ಲಿ ಸುಗಮ ಸಂಗೀತ ಪರಿಷತ್ತು, ಭಾನುವಾರ ಎನ್​.ಆರ್​.ಕಾಲನಿಯ ಅಶ್ವತ್ಥ ಕಲಾಭವನದಲ್ಲಿ ಆಯೋಜಿಸಲಾಗಿದ್ದ "ಬಿಆರೆಲ್​-78 ಹಾಗೂ ವಿವಿಧ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾವ್ಯವನ್ನು ಸಂತೋಷದಿಂದ ಆಸ್ವಾದಿಸಿ ರಚಿಸುವ ಮನಸ್ಥಿತಿ ಸಾಹಿತಿಗಳಿಂದ ದೂರವಾಗುತ್ತಿದೆ. ವೈರುಧ್ಯ ನಡುವೆಯೂ ಪರಸ್ಪರ ಗೌರವಿಸುವ ಮನಸ್ಥಿತಿ ನಮ್ಮದಾಗಬೇಕು. ಕಲಾ ಆರಾಧಕನು ಜನಪ್ರಿಯತೆ ಹಿಂದೆ ಹೋಗದೆ ತಮ್ಮ ಕೃತಿ ಮೂಲಕ ಜನರ ಪ್ರೀತಿ ಗಳಿಸುವತ್ತ ಗಮನಹರಿಸಬೇಕು. ಕವಿತೆಯಲ್ಲಿ ಸಂಕೀರ್ಣವಾಗಿರುವುದನ್ನು ಸರಳವಾಗಿ ಹೇಳುವ ಕಲೆ ಬೆಳೆಸಿಕೊಳ್ಳಬೇಕು. ಇದು ಸಮಗ್ರ ಗ್ರಹಿಕೆಗೆ ನೆರವಾಗುವ ಮಾತ್ರವಲ್ಲದೆ ಓದುಗನ ತಿಳುವಳಿಕೆ ಮಟ್ಟವೂ ಹೆಚ್ಚಳವಾಗಲಿದೆ ಎಂದರು.

ಜಿ.ಎಸ್​.ಶಿವರುದ್ರಪ್ಪ ಅವರು "ಅದಮ್ಯ ಜೀವನ ಪ್ರೀತಿಯ ಕವಿ' ಎಂದು ಬಿ.ಆರ್​.ಲಕ್ಷ್ಮಣ್​​ರಾವ್​​ ಅವರನ್ನು ಕರೆದಿದ್ದರು. ಜೀವನೋತ್ಸಾಹವನ್ನು ಸಾಹಿತ್ಯದಲ್ಲಿ ಉಣಬಡಿಸಿದ ಇವರು ಅದಮ್ಯ ಜೀವನ ಪ್ರೀತಿಯುಳ್ಳ ಕವಿಯಾಗಿದ್ದಾರೆ. ಎಲ್ಲ ವರ್ಗದ ಜನರು ಪ್ರೀತಿಸಬಹುದಾದ ಅಪರೂಪದ ವ್ಯಕ್ತಿತ್ವ ಇವರದ್ದು. ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದವರು ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಆರೆಲ್​ ಅವರ ಕಾವ್ಯಶಕ್ತಿ ದೊಡ್ಡದು:ಬಿ.ಆರ್​.ಲಕ್ಷ್ಮಣ್​​ರಾವ್​​ (ಬಿಆರೆಲ್​) ಅವರ ಕಾವ್ಯಶಕ್ತಿ ದೊಡ್ಡದಾಗಿದೆ.ಸುಗಮ ಸಂಗೀತ ಕ್ಷೇತ್ರದವರು ಇದನ್ನು ಗ್ರಹಿಸಿಕೊಂಡು ಹಾಡಿನ ಮೂಲಕ ಬೆಳೆಸಬೇಕು. "ಬಿಡದ ಬುವಿಯ ಮಾಯೆ' ಕವನ ಸಂಕಲನದಲ್ಲಿರುವ 951 ಕವಿತೆಗಳು ಜೀವನದ ಅನುಭವವನ್ನು ಸಾರುವಂತಿದ್ದು, ಪ್ರತಿಯೊಬ್ಬರೂ ಇದನ್ನು ಅಳವಡಿಸಕೊಳ್ಳಬೇಕೆಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಸಲಹೆ ನೀಡಿದರು.

4 ಪುಸ್ತಕ ಲೋಕಾರ್ಪಣೆ:ಬಿ.ಆರ್​.ಲಕ್ಷ್ಮಣ್​​ರಾವ್​​ ರಚಿಸಿರುವ "ಬಿಡದ ಬುವಿಯ ಮಾಯೆ'(ಈವರೆಗಿನ ಕವಿತೆಗಳು), "ಮೂರು ನಗೆ ನಾಟಕಗಳು' ಕೆ.ಸತ್ಯನಾರಾಯಣ ಬರೆದಿರುವ "ವರ್ಣಪಟಲ' ( ಬಿಆರೆಲ್​ ಸಾಹಿತ್ಯಾವಲೋಕನ), ಸುಮತಿ ಕೃಷ್ಣಮೂರ್ತಿ ಅವರ ಕವನ ಸಂಕಲನ "ವೈಶಾಖದ ಮಳೆ' ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ವಿಮರ್ಶಕ ಎಚ್​.ಎಸ್​ ಸತ್ಯನಾರಾಯಣ, ಕವಿ ಬಿ.ಆರ್​.ಲಕ್ಷ್ಮಣ್​​ರಾವ್​​, ಸಾಹಿತಿ ಸುಮತಿ ಕೃಷ್ಣಮೂರ್ತಿ ಮತ್ತಿತರರಿದ್ದರು.

ಪ್ರತಿ ಕವಿಯ ಮೇಲೆ ಸಮಾಜ, ವೃತ್ತಿ ಪ್ರಭಾವ ಬೀರುತ್ತದೆ. ಇದು ಕವಿಯ ಕಾವ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಲೇ ಪ್ರತಿಯೊಬ್ಬರ ಕವಿತೆಯೂ ಭಿನ್ನವಾಗಿರುತ್ತದೆ.ಕವಯತ್ರಿಗಳು ಕವಿತೆಗಳಲ್ಲಿ ತಮ್ಮ ಬದುಕಿನೊಂದಿಗೆ ಸಮಾಜ ನಮ್ಮನ್ನು ಹೇಗೆ ಕಾಣುತ್ತದೆ ಎನ್ನುವುದನ್ನೂ ಹೇಳುತ್ತಾರೆ. ಇದರಿಂದ ಅವರ ಬದುಕಿನ ಆಶಯ ಕವಿತೆಗಳಲ್ಲಿ ಕಾಣುಬಹುದು.

| ಎಚ್​.ಎಲ್​.ಪುಪ್ಪ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net