ಸಾಹಿತ್ಯಕ್ಕಿದೆ ಸಮಾಜ ಬದಲಿಸುವ ಶಕ್ತಿ : ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಕೋಡಿರಂಗಪ್ಪ ಅಭಿಪ್ರಾಯ

31CBP2
Published on

ಚಿಕ್ಕಬಳ್ಳಾಪುರ: ಸಾಹಿತ್ಯ ಕೃತಿಗಳ ಅಧ್ಯಯನದ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಸಲಹೆ ಮಾಡಿದರು.

ನಗರದ ಶಾಂತಿನಿಕೇತನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಸಾಪದಿಂದ ಸೋಮವಾರ ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ ಅವರ 126ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯಕ್ಕೆ ಸಮಾಜದ ಮನೋಭಾವವನ್ನು ಬದಲಿಸುವ ಶಕ್ತಿ ಇದೆ. ಉತ್ತಮ ಸಾಹಿತ್ಯ ಕೃತಿಗಳ ಅಧ್ಯಯನವು ಮಾನವೀಯ ಮೌಲ್ಯಗಳ ಕಲಿಕೆಯ ಜತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.

ಇತ್ತೀಚೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಐಚ್ಛಿಕ ವಿಷಯಗಳ ಮಧ್ಯೆ ಮಾತೃ ಭಾಷೆ, ಸಾಹಿತ್ಯದ ವಿಷಯಗಳು ಮಂಕಾಗುತ್ತಿರುವುದು ದುರದೃಷ್ಟಕರ. ಐಚ್ಛಿಕ ವಿಷಯಗಳ ಅಧ್ಯಯನದಿಂದಷ್ಟೇ ಜ್ಞಾನಾರ್ಜನೆ ಎಂಬ ನಕಾರಾತ್ಮಕ ಮನೋಭಾವವನ್ನು ಬಿಡಬೇಕು. ಕನ್ನಡದ ಸಮಗ್ರ ಅಧ್ಯಯನಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ದ.ರಾ.ಬೇಂದ್ರೆ ಕಷ್ಟಗಳ ಕುಲುಮೆಯಲ್ಲಿ ಅರಳಿ ನಿಂತ ಅಭೂತಪೂರ್ವ ಪ್ರತಿಭೆ. ಪ್ರಕೃತಿ, ಆಧ್ಯಾತ್ಮ, ಸ್ತ್ರೀ ಸಂಕಟಗಳು ಸೇರಿ ಹಲವು ವಿಷಯಗಳ ಕುರಿತ ಕಾವ್ಯರಚನೆ ಮಾಡಿ ಗಮನ ಸೆಳೆದಿದ್ದು, ಅವರ ಕಾವ್ಯಪ್ರತಿಭೆಗೆ ಅವರೇ ಸಾಟಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ, ಬೇಂದ್ರೆ ಅವರ ಮಾತೃಭಾಷೆ ಮರಾಠಿಯಾದರೂ ಕನ್ನಡ ಸಾಹಿತ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿದ್ದಾರೆ. ಜನ ಸಾಮಾನ್ಯರಿಗೆ ಹತ್ತಿರವಾದ ಸಾಹಿತ್ಯ ಕೃತಿ ರಚಿಸಿದ್ದು, ಭಾಷೆಯೂ ಸರಳವಾಗಿದೆ ಎಂದು ತಿಳಿಸಿದರು.

ನರಬಲಿ ಶೀರ್ಷಿಕೆಯ ಕವಿತೆಯನ್ನು ಬರೆದು ಬ್ರಿಟಿಷರಿಂದ ರಾಷ್ಟ್ರದ್ರೋಹದ ಪಟ್ಟದ ಜತೆಗೆ ಶಿಕ್ಷೆಯನ್ನೂ ಅನುಭವಿಸುವಂತಾಯಿತಾದರೂ ಆದರ್ಶ ತತ್ವಗಳ ವಿಚಾರದಲ್ಲಿ ರಾಜಿಯಾಗಲಿಲ್ಲ. ಇವರನ್ನು ಯುವ ಜನರು ಮಾದರಿಯಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಬೇಂದ್ರೆ ಕುರಿತ ಪ್ರಬಂಧ, ಭಾಷಣ ಮತ್ತು ಗೀತಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ನೀಡಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗ.ನ.ಅಶ್ವತ್ಥ್ ಬೇಂದ್ರೆಯವರ ಗೀತ ಗಾಯನ ಗಮನ ಸೆಳೆಯಿತು.

ಕಾಲೇಜಿನ ಕಾರ್ಯದರ್ಶಿ ಕುಮಾರ್, ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ಎಸ್.ಎನ್.ಅಮೃತ್‌ಕುಮಾರ್, ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಪದಾಧಿಕಾರಿಗಳಾದ ಚೆನ್ನಮಲ್ಲಿಕಾರ್ಜುನ್, ನಾಗಭೂಷಣ್‌ರೆಡ್ಡಿ, ಪ್ರೇಮಾಲೀಲಾ ವೆಂಕಟೇಶ್, ಗೊಳ್ಳುಚಿನ್ನಪ್ಪನಹಳ್ಳಿ ವೆಂಕಟೇಶ್, ಜಾನಪದ ಪರಿಷತ್‌ನ ತಾಲೂಕು ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net