

ಬೆಳಗಾವಿ: ಸಾಹಿತ್ಯಕ್ಕೆ ಸಮಾಜವನ್ನು ಪರಿವರ್ತಿಸುವ ಶಕ್ತಿ ಇದೆ ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕವಯಿತ್ರಿ ಸುನೀತಾ ಸೋಲಾಪುರೆ ಪಾಟೀಲ ಅವರ ‘ಮುಕ್ತಕ ಮಣಿ ಕೃತಿ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಸಾಮಾಜಿಕ ಚಿಂತನೆಗಳುಳ್ಳ ಕವನಗಳು ಸುನೀತಾ ಅವರ ಕೃತಿಯಲ್ಲಿ ಅಡಗಿರುವುದು ವಿಶೇಷ ಎಂದರು. ಕವಿ ಅನಂತ ತಾಮ್ಹನ್ಕರ್ ಪ್ರಾಸ್ತಾವಿಕ ಮಾತನಾಡಿ, ಸಮಾಜಮುಖಿ ಕಾರ್ಯಗಳೊಂದಿಗೆ ಸಾಹಿತ್ಯ ಲೋಕಕ್ಕೆ ಸುನೀತಾ ಅವರು ಕೊಡುಗೆ ನೀಡಿದ್ದಾರೆ.
ಬರೆಯುವ ಹಾಗೂ ಬರೆದಿದ್ದನ್ನು ಬದುಕಿಗೆ ಅಳವಡಿಸಿಕೊಳ್ಳುವ ಕೆಲಸವನ್ನು ಲೇಖಕಿಯರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಸಮಾಜವನ್ನು ನೋಡುವುದರ ಜತೆಗೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಸಾಹಿತ್ಯ ಅಭಿರುಚಿ ಹೆಚ್ಚಿಸುತ್ತಿರುವುದು ಸಂಸತ ತಂದಿದೆ. ಅವರಿಂದ ಇನ್ನಷ್ಟು ಕೃತಿ ಬರಲಿ. ಸಮಾಜದ ಮೇಲೆ ಬೆಳಕು ಚೆಲ್ಲಲಿ ಎಂದರು. ಕೆ.ಟಿ.ಶ್ರೀಮತಿ ಕೃತಿ ಪರಿಚಯಿಸಿದರು. ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಕೃತಿಕಾರರ ಬಗ್ಗೆ ಪರಿಚಯಿಸಿದರು. ಸಾಹಿತಿ ಹಮೀದಾಬೇಗಂ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.