

ಹೂವಿನಹಡಗಲಿ: ತಂತ್ರಜ್ಞಾನ ಬಳಕೆಯಿಂದ ಯುವಕರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ಕುಂಠಿತಗೊಳ್ಳುತ್ತಿದೆ ಎಂದು ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್.ಎಂ.ಬೆಟ್ಟಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ನೌಕರರ ಸಂಘ ಹಾಗೂ ಮಲ್ಲಿಗೆ ಕಲಾ ಸಂಸ್ಥೆಯ ಸಹಯೋಗದಿಂದ ಮಹಾತ್ಮ ಗಾಂಧೀಜಿ ದಿನಾಚರಣೆ ಹಾಗೂ ದಸರಾ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ, ಕವಿಗೋಷ್ಠಿ ಮತ್ತು ದತ್ತಿನಿಧಿ ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಕನ್ನಡ ಸಾಹಿತ್ಯ ಯುವ ಜನರಿಂದ ದೂರ ಉಳಿಯುತ್ತಿದೆ. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸಾಹಿತಿಗಳ ಪರಿಚಯವನ್ನು ಮಾಡಿಸಬೇಕು. ಸಾಹಿತ್ಯಕ್ಕೆ ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸುವ ಶಕ್ತಿ ಇದೆ ಎಂದರು.
ಸಾಹಿತಿ ತೋ.ಮ.ಶಂಕ್ರಯ್ಯ ಹಾಗೂ ಉಪನ್ಯಾಸಕ ಶಂಕರ್ ಬೆಟಗೇರಿ ‘ಬಾಪೂಜಿಗೆ ಋಣಿ’ ಕವನದ ಕುರಿತು ಮಾತನಾಡಿದರು. ಪ್ರಾಚಾರ್ಯ ಡಾ.ಕೆ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಕರಿವೀರನಗೌಡ ಪಾಟೀಲ್, ಶಿಕ್ಷಕ ಎಲ್.ಖಾದರ ಬಾಷಾ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ, ಪ್ರಮುಖರಾದ ನಾಗಮಂಜುಳಾ ಜೈನ್, ನಾಗರಾಜ ಮಲ್ಕಿಒಡೆಯರ್, ತುಳಜಾನಾಯ್ಕ ಪದ್ಮರಾಜ್ ಜೈನ್, ರೋಷನ್ ಜಮೀರ್, ತಾರಾಸಿಂಗ್ ಇತರರಿದ್ದರು.