ಸಾಹಿತ್ಯಕ್ಕೆ ಭಾಷೆಯ ಅಂತರವಿಲ್ಲ

urdu kavigosthi
Published on

ಮೈಸೂರು: ಭಾಷೆ ಎನ್ನುವುದು ಸಾಂಸ್ಕೃತಿಕ ಹಿನ್ನೆಲೆ ಮತ್ತು ಚರಿತ್ರೆಯನ್ನು ತಿಳಿಸುವಂತಹ ಒಂದು ಸಂಪರ್ಕ ಸಾಧನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.


ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಕ್ಲಾಸಿಕ್ ಸಭಾ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಉರ್ದು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆ ಎನ್ನುವುದು ಒಂದು ಸಂಪರ್ಕ ಸೇತುವೆ. ಇದನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನೋಡಲು ಸಾಧ್ಯವಿಲ್ಲ ಎಂದರು.


ಸಾಹಿತ್ಯಕ್ಕೆ ಭಾಷೆಯ ಅಂತರವಿಲ್ಲ. ಸಾಹಿತ್ಯದ ಅಂಶಗಳು ಯಾವ ಭಾಷೆಯಲ್ಲಿದ್ದರೂ ಅರ್ಥ ಒಂದೇ. ಕವಿತೆಗೂ ಮತ್ತು ಕವಿಗೂ ವ್ಯತ್ಯಾಸವಿಲ್ಲ. ಹಾಗೆಯೆ, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ಕವಿ ಯಾವ ಭಾಷೆಯನ್ನು ಬಳಸಿದರೂ ಆತನ ಸಾಹಿತ್ಯದ ಭಾವನೆ ಒಂದೇ ಆಗಿರುತ್ತದೆ ಎಂದು ಹೇಳಿದರು.


ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೈಸೂರು ರಾಜರು ಕಲೆ ಮತ್ತು ಸಾಹಿತ್ಯಕ್ಕೆ ನೀಡುತ್ತಿದ್ದ ಕೊಡುಗೆಯನ್ನು ಈಗಿನ ದಸರಾ ಮಹೋತ್ಸವದಲ್ಲೂ ನಿರ್ವಹಿಸಿಕೊಂಡು ಬಂದಿದ್ದು, ದಸರಾ ಕವಿಗೋಷ್ಠಿಯಲ್ಲಿ ಉರ್ದು ಕವಿಗೋಷ್ಠಿ ವಿಭಿನ್ನ ಕಾರ್ಯಕ್ರಮವಾಗಿದೆ ಎಂದರು.


ಬಾಲಿವುಡ್ ಹಿರಿಯ ನಟ ರಜಾ ಮುರಾದ್, ಉರ್ದು ಕವಿಗಳಾದ ಅಬ್ರಾರ್ ಖಾಶೀಫ್, ಜಮೀಲ್ ಅಸ್ಗರ್, ಶಜಾನ್ ಶಜ್ನಂ, ಅಹಮದ್ ಅಲ್ವಿ, ಖಮರ್ ಸುರೂರ್, ಚಿಂತಕ ಮುಜಾಫರ್ ಅಸಾದಿ, ಉಪಸಮಿತಿಯ ಡಾ.ಎಂ.ದಾಸೇಗೌಡ, ಡಾ.ವಿಜಯಕುಮಾರಿ ಎಸ್.ಕರಿಕಲ್, ಎಂ.ಎಸ್.ಗಿರಿಧರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net