ಸಮ್ಮೇಳನಕ್ಕೆ ವಿದ್ಯಾರ್ಥಿಗಳನ್ನು ಕರೆತರುವಂತಾಗಲಿ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಸಲಹೆ

Literature guest of the week Mandya
Published on

ಮಂಡ್ಯ: ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮಹತ್ವವನ್ನು ವಿದ್ಯಾರ್ಥಿ ಹಾಗೂ ಯುವಕರಿಗೆ ತಿಳಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ 50 ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಕರೆತರುವ ಕೆಲಸವನ್ನು ಕಸಾಪ ಮಾಡಬೇಕು ಎಂದು ಎಂದು ಹಿರಿಯ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಸಲಹೆ ನೀಡಿದರು.

ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಮೂಡುವಂತೆ ಮಾಡದೇ ಹೋದರೆ ಸಾಹಿತ್ಯ ಸಮ್ಮೇಳನ ಮಾಡಿ ಯಾವ ಸಾರ್ಥಕತೆಯೂ ಇರುವುದಿಲ್ಲ. ನಮ್ಮ ಮಕ್ಕಳಲ್ಲಿ ಸಾಹಿತ್ಯ ಪ್ರೀತಿಯನ್ನು ಹುಟ್ಟಿಸದೇ ಹೋದರೆ, ಬರೆಯುವವರ ಸಂಖ್ಯೆ ಹೆಚ್ಚಾಗಿ ಓದುವವರ ಸಂಖ್ಯೆ ಕ್ಷೀಣಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮ್ಮೇಳನದ ವಿಷಯವಾಗಿ ಅಂಕುಡೊಂಕು, ಓರೆಕೋರೆ, ತಪ್ಪುಒಪ್ಪುಗಳನ್ನು ಸೀಮಿತ ಚೌಕಟ್ಟಿನಲ್ಲಿರಿಕೊಂಡು ಮಂಡ್ಯದ ಕೀರ್ತಿ ನಾಡಿನಾದ್ಯಂತ ಹರಡುವಂತೆ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಉದ್ದೇಶ, ನಿರ್ಧಾರ, ಆಶಯಗಳ ಒತ್ತಾಯಕ್ಕೆ ಸಂಬಂಧಿಸಿದಂತೆ ಕಸಾಪ ಅಧ್ಯಕ್ಷರಿಗೆ ಸಲಹೆ ನೀಡೋಣ. ಈ ಹಿಂದೆ ಹಳೆಗನ್ನಡ ಕವಿ, ಸಾಹಿತಿಗಳಾದ ಸಮ್ಮೇಳನಾಧ್ಯಕ್ಷರು ಪೀಠಾಧ್ಯಕ್ಷರನ್ನು ಸಾನಿಧ್ಯ ವಹಿಸದಂತೆ ಹೇಳಿ, ಸಮ್ಮೇಳನದ ಅಂತ್ಯದಲ್ಲಿ ತಮ್ಮ ಮಗಳಿಗೆ ಮಠದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೇಳಿದ ಪ್ರಸಂಗ ನಡೆದಿದೆ. ಮತ್ತೊಂದು ಪ್ರಸಂಗದಲ್ಲಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷರೊಬ್ಬರು ಸಮಾರೋಪ ಸಮಾರಂಭಕ್ಕೆ ಬರಬೇಕಾದರೆ ಮಠಾಧೀಶರು ಬರದಂತೆ ಹೇಳಿ, ಒಂದು ವರ್ಷದ ನಂತರ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಚುನಾವಣೆಯಲ್ಲಿ ಅದೇ ಮಠಾಧೀಶರಿಗೆ ಪತ್ರ ಬರದು ಭಕ್ತ ಸಾಹಿತಿಗಳು ಮತ ಹಾಕುವಂತೆ ಮನವಿ ಮಾಡಿದ್ದರು. ಆದ್ದರಿಂದ ಸಾಹಿತಿಯ ವೈಯಕ್ತಿಕ ಸಾಧನೆ ಮುಖ್ಯವಲ್ಲ. ಸಾಹಿತ್ಯ ಲೋಕಕ್ಕೆ ನೀಡುವ ಕೊಡುಗೆಯ ಆಧಾರದ ಮೇಲೆ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನ ಅಧ್ಯಕ್ಷತೆ ವಹಿಸುವವರು, ಎಷ್ಟು ಪುಸ್ತಕ ಬರೆದಿದ್ದಾರೆ ಎಂಬುದು ಅವಶ್ಯಕತೆಯಿಲ್ಲ. ಆದರೆ ಅವರ ಕೊಡುಗೆ ಆಧಾರದ ಮೇಲೆ ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಆಯ್ಕೆಯಾದ ಅಧ್ಯಕ್ಷರನ್ನು ನಾನೇ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆಂಬ ಭಾವನೆಯಿಂದ ಸ್ವೀಕರಿಸಬೇಕು. ಹಿಂದಿನ 86 ನುಡಿಜಾತ್ರೆಯ ಪಟ್ಟಿಯಲ್ಲಿ ಸಮ್ಮೇಳನ ನಡೆದ ಜಿಲ್ಲೆಯ ಸಾಹಿತಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿಲ್ಲ ಎಂದ ಅವರು, ಮಂಡ್ಯ ನಗರದಲ್ಲೇ ಸಾಹಿತ್ಯ ಸಮ್ಮೇಳನ ಆಗಬೇಕು. ನಗರದ ಹೊರಗಡೆ ಆಗುವುದು ಅಪ್ರಸ್ತುತ. ಮಂಡ್ಯ ವಿಶ್ವವಿದ್ಯಾಲಯದ ಆವರಣದ ಉತ್ತಮವಾಗಿದ್ದು, ಪಕ್ಕದ ಶಂಕರಗೌಡ ರಸ್ತೆಯು ಪುಸ್ತಕ ಮಾರಾಟ ಮಳಿಗೆ ಇಡಲು ಸೂಕ್ತ ಸ್ಥಳವಾಗಿದೆ. ಊಟ ಹೊಟ್ಟೆಗೆ ಬೇಕು. ಸಮ್ಮೇಳನದಲ್ಲಿ ಊಟಕ್ಕೆ ಪ್ರಾಮುಖ್ಯತೆ ನೀಡದೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷರಾಗುವವರು ಮುಂದಿನ ಸಮ್ಮೇಳನ ನಡೆಯುವವರೆಗೂ ಸಾಹಿತ್ಯ ಪರಿಷತ್‌ನ ಎಲ್ಲ ಚಟುವಟಿಕೆಗಳಲ್ಲಿ ಅಧಿಕೃತ ವ್ಯಕ್ತಿಯಾಗಿ ಇರಬೇಕು. ಸಮ್ಮೇಳನದ ನಿರ್ಣಯಗಳನ್ನು ಜಾರಿ ಮಾಡುವವರೆಗೂ ಮುಂದಿನ ಸಮ್ಮೇಳನ ನಡೆಯದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ 7 ಕೋಟಿ ಜನತೆಯೂ ಒಕ್ಕೊರಲಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಇನ್ನು ಪ್ರತಿನಿಧಿಗಳಾಗುವವರು ಸಮ್ಮೇಳನದಲ್ಲಿ ಭಾಗವಹಿಸಬೇಕು. ಪ್ರವಾಸ ಮಾಡುವ ಉದ್ದೇಶ ಹೊಂದಬಾರದು. ಸಮ್ಮೇಳನದ ಪ್ರತಿನಿಗಳು ಕಡ್ಡಾಯವಾಗಿ ಪುಸ್ತಕಕೊಳ್ಳುವಂತೆ ಆಗಬೇಕು. ಪುಸ್ತಕ ಕೊಂಡವರಿಗೆ ಮಾತ್ರ ಊಟದ ಕೂಪನ್ ನೀಡುವಂತಹ ಕೆಲಸವಾಗಲಿ. ಕನ್ನಡ ಸಾಹಿತ್ಯ ಎಂದೊಡನೆ ಓದುವುದು ಮಾತ್ರವಲ್ಲ. ಜಾನಪದ, ಸಂಗೀತ, ರಂಗಭೂಮಿ, ಲಲಿತ ಕಲೆ, ಪ್ರವಾಸ ಕೇಂದ್ರ ಎಲ್ಲವನ್ನು ಒಳಗೊಂಡಂತಹ ಮನೋಭಾವನೆ ಇಟ್ಟುಕೊಂಡಾಗ ಸಾಹಿತ್ಯಕ್ಕೆ ದೊಡ್ಡ ಸೇವೆ ಮಾಡಿದಂತಾಗುತ್ತದೆ. ಕಿರಿಯರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ನಮ್ಮ ಹೆಜ್ಜೆ ಗುರುತುಗಳನ್ನು ನೀಡುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net