ಸಹಾನುಭೂತಿ ಮೂಡಿಸುತ್ತದೆ ಸಾಹಿತ್ಯ

h15-mulla
Published on

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಹಬೀಬ್ ಶಾ ರೆಸಿಡೆನ್ಸಿಯಲ್ಲಿ ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಸಮಾಜ ನಿರ್ಮಿಸುವಲ್ಲಿ ಸಾಹಿತ್ಯದ ಪಾತ್ರ ಕುರಿತು ವಿಚಾರ ಗೋಷ್ಠಿಯನ್ನು ಸೋಮವಾರ ಏರ್ಪಡಿಸಲಾಗಿತ್ತು.
ನಿವೃತ್ತ ಪ್ರಾಚಾರ್ಯ ಎಂ.ಎಸ್. ಮುಲ್ಲಾ ಉದ್ಘಾಟಿಸಿ ಮಾತನಾಡಿ, ಸಾಹಿತ್ಯವು ಸಹಾನುಭೂತಿ, ತಿಳಿವಳಿಕೆ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುತ್ತದೆ. ಈ ಮೂಲಕ ಸಮಕಾಲೀನ ಸಮಾಜ ರೂಢಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾಹಿತ್ಯ ಮನುಷ್ಯನಿಗೆ ಇನ್ನೊಬ್ಬ ವ್ಯಕ್ತಿಯನ್ನು ಪೂರ್ಣಹೃಯಯದಿಂದ ಅರ್ಥಮಾಡಿಕೊಡುತ್ತದೆ. ಸಾಹಿತ್ಯ ಬಿಟ್ಟು ಸಮಾಜವಿಲ್ಲ, ಸಮಾಜ ಬಿಟ್ಟು ಸಾಹಿತ್ಯವಿಲ್ಲ. ಸಮಾಜವನ್ನು ಜ್ಞಾನ, ಕಲೆ ಮತ್ತು ಸಾಹಿತ್ಯದಿಂದ ಕಟ್ಟಬೇಕು ಎಂದರು.
ಧಾರವಾಡ ಕರ್ನಾಟಕ ಕಾಲೇಜ್‌ನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ, ಉರ್ದು ಅಕಾಡೆಮಿ ಸದಸ್ಯ ವೆಂಕಪ್ಪ ಕಲಾದಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸಮಾಜದ ಕೈಗನ್ನಡಿ. ಸಾಹಿತ್ಯದಿಂದ ಮಾತ್ರ ಸಾಮಾಜಿಕ ಸಾಮರಸ್ಯ ಮೂಡಲು ಸಾಧ್ಯ. ಸಮಾಜದ ಸ್ವಾಸ್ಥ್ಯಕ್ಕೆ ಸಾಹಿತ್ಯಬೇಕು ಎಂದರು.
ಕವಿ ಹೈದರ್ ಮಜೇರಿ ಮಾತನಾಡಿ, ಸಾಹಿತ್ಯ ಮತ್ತು ಸಮಾಜಕ್ಕೂ ನಿಕಟ ಸಂಬಂಧವಿದೆ. ಸಾಹಿತ್ಯ ಮಾನವ ಜೀವನದ ಏಳಿಗೆಗೆ ಪ್ರೇರಕವಾಗಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಾಕ್ಕಾಗಿ ಸಾಹಿತ್ಯ ಅಗತ್ಯ ಎಂದರು. ಧಾರವಾಡದ ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಡಾ. ಸುಹೇಲ್ ನಿಜಾಮ, ಲೇಖಕ ಸೈಯದ್ ಮುನೀರ್ ಹುಸೇನಿ ಮಾತನಾಡಿದರು.
ವೆಂಕಪ್ಪ ಕಲಾದಗಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಹಾಗೂ ಉರ್ದು ಕವಿ ಖಲೀಲ್ ಉರ್ ರೆಹಮಾನ ಮಮೂನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉರ್ದು ಕ್ಯಾಲಿಗ್ರಾಫರ್ ಗಯಾಸುದ್ದೀನ ಖಾಜಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net