

ಹಾವೇರಿ: ಪಾಲಕರು ಮಕ್ಕಳನ್ನು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತಗೊಳಿಸಿ ಒತ್ತಡ ಹೆರದೆ ಸ್ನೇಹಿತರಂತೆ ಪ್ರೀತಿಸಿ ಪ್ರಬುದ್ಧರಾಗಿ ಬೆಳೆದು ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆ ಪಾಲಕರ ಪಾತ್ರವು ಬಹುಮುಖ್ಯವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಹಿರೇಕೆರೂರ ತಾಲೂಕು ಪ್ರತಿನಿಧಿ ನಾಗಪ್ಪ ಹೆಗೇರಿ ಹೇಳಿದರು.
ಹಿರೇಕೆರೂರ ತಾಲೂಕಿನ ಹಂಸಭಾವಿ ಹಾಲೇವಾಡಿಮಠ ಆವರಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಕೇಂದ್ರ ಸಮಿತಿ ಹುಬ್ಬಳ್ಳಿ, ಜಿಲ್ಲಾ ಘಟಕ ಹಾವೇರಿ ಹಾಗೂ ಹಿರೇಕೆರೂರ, ರಟ್ಟಿಹಳ್ಳಿ ಅವಳಿ ತಾಲೂಕಿನ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚುಟುಕು ಗೋಷ್ಠಿ ಹಾಗೂ ಹಡಪದ ಅಪ್ಪಣ್ಣ, ನಾರಾಯಣ ಗುರು, ವಿಶ್ವಕರ್ಮ, ಜಯಂತೋತ್ಸವ ಮತ್ತು ಸಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ದಿವಂತ ಮಕ್ಕಳಿಗೆ ಪ್ರೋತ್ಸಾಹಹಿಸುವುದರ ಜೊತೆ ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರೋತ್ಸಾಹ ಮತ್ತು ಧೈರ್ಯ ತುಂಬುವುದರ ಜೊತೆಯಲ್ಲಿ ಮಕ್ಕಳ ಬೌದ್ಧಿಕ ಮಟ್ಟದ ವಿಕಾಸಕ್ಕಾಗಿ ಸಾಹಿತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಕಚುಸಾಪ ಹಿರೇಕೆರೂರ ಘಟಕದ ಗೌರವಾಧ್ಯಕ್ಷ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಪ್ರತೀಕ್ಷಾ ಹಾಲೇವಾಡಿಮಠ ಮತ್ತು ಪ್ರತಿಜ್ಞಾ ಹಾಲೇವಾಡಿಮಠ, ನಿವೃತ್ತ ಶಿಕ್ಷಕ ರವಿರಾಜ ತಿರುಮಲೆ ಅವರನ್ನು ಸನ್ಮಾನಿಸಲಾಯಿತು. 15ಕ್ಕೂ ಹೆಚ್ಚು ಕವಿಗಳು ಚುಟುಕು ವಾಚನ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ಶೇಖರಗೌಡ ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ, ಡಾ. ಎಸ್. ಹನುಮಂತಪ್ಪ, ರವಿರಾಜ ತಿರುಮಲೆ, ಬಸವರಾಜ ಪೂಜಾರ, ಯೋಗೀಶ ಬಸರಳ್ಳಿ, ಜ್ಯೋತಿ ಹಾಲೇವಾಡಿಮಠ, ಭುವನೇಶ್ವರಿ ಪಟಗಾರ, ಜಿ.ಎನ್. ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.