ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರ

Raichur Kasapa
Published on

ರಾಯಚೂರು: ಕಥೆಗಳು ಆಯಾ ಭಾಷೆಗಳನ್ನು ಉಳಿಸುವ ಹಾಗೂ ಆ ಕಾಲಘಟ್ಟದ ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತವೆ. ಕಲಿಯಬೇಕು ಎನ್ನುವ ಮನೋಭಾವವಿದ್ದಾಗ ಉತ್ತಮ ಕಥೆ ಕಟ್ಟುವ ಹುಮ್ಮಸ್ಸು ಬರುತ್ತದೆ ಎಂದು ಸಾಹಿತಿ ಮಹಾಂತೇಶ ನವಲಕಲ್ ಹೇಳಿದರು.

ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಥಾ ಕಮ್ಮಟದಲ್ಲಿ ಸಮಕಾಲೀನ ಜಗತ್ತು ಮತ್ತು ಕಥಾ ಚೌಕಟ್ಟು ಕುರಿತು ಭಾನುವಾರ ಮಾತನಾಡಿದರು. ಕಥೆ ಅಗಾಧತೆಯನ್ನು ಬಯಸುತ್ತದೆ. ಕನ್ನಡ ಸಾಹಿತ್ಯ ಪ್ರಕಾರದಲ್ಲಿನ ನವ್ಯ, ನವೋದಯ, ದಲಿತ, ಬಂಡಾಯ ಮುಂತಾದ ಇಸಂ ಮಾದರಿಗಳಿಂದ ಸಾಹಿತ್ಯ ರಚನೆಗೆ ಅನುಕೂಲವಾಗಿದೆಯೇ ಅಥವಾ ತೊಡಕಾಗಿದೆಯೇ ಎನ್ನುವುದು ಅರ್ಥಕ್ಕೆ ಸಿಗದಂತಾಗಿದೆ ಎಂದರು.

ಜ್ಞಾನವನ್ನು ಕಥೆಯನ್ನಾಗಿ ಪರಿವರ್ತಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಕಥೆ ಹರಿಯುವ ನದಿಯಂತಿದ್ದು, ಜ್ಞಾನವನ್ನು ಯಾವ ರೀತಿಯಲ್ಲಿ ಅರಿತುಕೊಂಡು ಹೇಳುತ್ತೀರಿ ಎನ್ನುವುದರ ಮೇಲೆ ಕಥೆಯ ಗಂಭೀರತೆ ನಿರ್ಧಾರವಾಗುತ್ತದೆ. ಎಲ್ಲ ಕಾಲಘಟ್ಟದಲ್ಲಿ ರಾಯಚೂರು ಜಿಲ್ಲೆಯ ಕಥೆಗಾರರಿಂದ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಸಿಕ್ಕಿದೆ. ಶಾಂತರಸರಿಂದ ಹಿಡಿದು ಇಂದಿನ ಪೀಳಿಗೆಯ ಕಥೆಗಾರರು ಹಾಗೂ ಇತರ ಪ್ರಕಾರಗಳ ಸಾಹಿತಿಗಳು ಕ್ಷೇತ್ರದಲ್ಲಿ ಉತ್ತಮ ಕೃಷಿ ಮಾಡುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ಮಹಾಂತೇಶ ನವಲಕಲ್ ಹೇಳಿದರು.

ಸಾಹಿತಿ ಶರಣಬಸವ ಗುಡದಿನ್ನಿ ಸಣ್ಣ ಕಥೆಗಳ ರಚನೆ, ವಿನ್ಯಾಸ, ವಿಷಯ ವಸ್ತು ಯಾವ ರೀತಿ ಇತರಬೇಕು ಹಾಗೂ ಕಥೆ ರಚನೆ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಬಿರಾರ್ಥಿಗಳು ಸಂವಾದ ನಡೆಸಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿಗಳಾದ ವೀರಹನುಮಾನ, ಡಾ.ಬಿ.ಎಂ.ಶರಭೇಂದ್ರಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net