

ಹಾಸನ: ಎಲ್ಲರೂ ಕವಿಯಾಗಲು ಸಾಧ್ಯವಿಲ್ಲ. ಅಧ್ಯಯನ, ಅನುಭವ ಹಾಗು ಅಂತರಂಗದಲ್ಲಿ ಭಾವನೆಗಳನ್ನು ಗಟ್ಟಿಯಾಗಿ ಕಾಪಾಡಿಕೊಳ್ಳವವರು ಮಾತ್ರ ಕವಿಯಾಗುತ್ತಾರೆ ಎಂದು ಎವಿಕೆ ಮಹಿಳಾ ಕಾಲೇಜು ಪ್ರಾಂಶುಪಾಲ ಸೀ.ಚ.ಯತೀಶ್ವರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ರಾಜ್ಯ ಹಾಗೂ ಜಿಲ್ಲಾ ಬರಹಗಾರರ ಸಂಘದಿಂದ ಎಚ್.ಬಿ. ಜ್ವಾಲನಯ್ಯನವರ ಸರಣಾರ್ಥ ನಡೆದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಎಲ್ಲರೂ ರೈತರಾಗಿದ್ದರೂ ಕೃಷಿ ಕುರಿತು ಕಾವ್ಯ ರೂಪಕ್ಕೆ ತರಲು ಕೆಲವರಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಜಗತ್ತಿನ ಅನುಭವಗಳನ್ನು ತನ್ನೊಳಗೆ ಇಟ್ಟುಕೊಂಡು ಅದಕ್ಕೆ ಜೀವಂತಿಕೆ ಕೊಡುವುದೇ ಕವಿಯ ವೈಶಿಷ್ಟ್ಯ. ಸಾಹಿತ್ಯದಿಂದ ಮನ ಪರಿವರ್ತನೆಯನ್ನು ಕಾಣಬಹುದಾಗಿದೆ. ಕಥೆ, ಕಾದಂಬರಿ ಹಾಗೂ ಕವಿತೆಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ ಎಂದರು.
ಪಂಪ, ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಚಾಮರಸ ಸೇರಿ ಅನೇಕರು ಶಬ್ದಗಳ ಜತೆ ಆಟವಾಡಿ ಜನರಿಗೆ ತಲುಪಿಸಿದ್ದಾರೆ. ಹಾಗಾಗಿ ಕವಿ ಸಮಾಜ ಸುಧಾರಕನ ಸ್ಥಾನದಲ್ಲಿ ನಿಲ್ಲುತ್ತಾನೆ. ಸಾಹಿತ್ಯದಲ್ಲಿ ಕವಿಗಳ ಪಾತ್ರ ಎಷ್ಟಿದೆಯೋ ಅಷ್ಟೆ? ಜವಾಬ್ದಾರಿ ಗಾಯಕರದ್ದೂ ಆಗಿರುತ್ತದೆ. ಕವಿಯ ಭಾವನೆ ಎಲ್ಲರಿಗೂ ಅರ್ಥವಾಗುವಂತೆ ಮುಟ್ಟಿಸುವ ಕೆಲಸವನ್ನು ಗಾಯಕರು ಶ್ರದ್ಧೆಯಿಂದ ಮಾಡುತ್ತಾರೆ ಎಂದರು.
ಯುವ ಸಮುದಾಯ ಸಾಹಿತ್ಯಕ್ಕೆ ಆದ್ಯತೆ ನೀಡಬೇಕು. ತಂತ್ರಜ್ಞಾನ ಯುಗದಲ್ಲಿ ಯುವಕರ ಅಭಿರುಚಿ, ಆಕಾಂಕ್ಷೆಗಳು ಬದಲಾಗುತ್ತಿವೆ. ವ್ಯಕ್ತಿತ್ವ ವಿಕಸನ, ಮಾನವೀಯ ಮೌಲ್ಯ, ಸಂಸ್ಕಾರ ಹಾಗೂ ಸಮಾಜದ ಏಳಿಗೆಗೆ ಏನಾದರೂ ಕೊಡುಗೆ ನೀಡಬೇಕು ಎಂದು ಬಯಸಿದರೆ ಅಂತವರು ಮೊದಲು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಹೆಚ್ಚಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅನಕೃ ಸೇರಿದಂತೆ ಅನೇಕರು ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಕುರಿತು ಗಡಿ ಜಿಲ್ಲೆಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರೂ ತವರು ಜಿಲ್ಲೆಯಲ್ಲೇ ಗುರುತಿಸದಿರುವುದು ಬೇಸರದ ಸಂಗತಿ. ಆದ್ದರಿಂದ ನಾನು ಬರಹಗಾರರ ಸಂಘ ಜಿಲ್ಲಾಧ್ಯಕ್ಷನಾಗಿ ಸಾಹಿತ್ಯ ಸೇವೆ ಆರಂಭಿಸಿದೆ. ಇದುವರೆಗೆ 700 ಜನರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಒಂಬತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು. ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್, ಸಾಹಿತಿ ಎನ್.ಎಲ್. ಚನ್ನೇಗೌಡ, ಎ.ಎನ್. ಮಧುಸೂದನ್, ವಿಶ್ವಾಸ್ ಡಿ. ಗೌಡ, ಪತ್ರಕರ್ತ ವೆಂಕಟೇಶ್, ಸುಕನ್ಯ ಮುಕುಂದ, ಬಾರಾಳು ಶಿವರಾಮು, ಚೈತ್ರಾ ಮಂಜೇಗೌಡ, ಬೇಲೂರು ನಾಗೇಶ್, ಬಾ.ನಂ. ಲೋಕೇಶ್ ಮತ್ತಿತರರಿದ್ದರು.